ರತ್ನಪ್ರಭಾ ಮತ್ತು ಉಮೇಶ್ ಜಾಧನ್
ರಾಜಕೀಯ
ಚಿಂಚೋಳಿ ಉಪಚುನಾವಣೆ: ಕುಟುಂಬಸ್ಥರಿಗೆ ಟಿಕೆಟ್ ಕೊಡುವಂತೆ ಜಾಧವ್ ಪಟ್ಟು; ಕಣದಿಂದ ರತ್ನಪ್ರಭಾ ಔಟ್?
ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಉಮೇಶ್ ಜಾಧವ್ ಅವರಿಂದ ತೆರವಾಗಿರುವ ಚಿಂಚೋಳಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಲಾಬಿ ತೀವ್ರಗೊಂಡಿದೆ....
ಕಲಬುರಗಿ: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಉಮೇಶ್ ಜಾಧವ್ ಅವರ ರಾಜಿನಾಮೆಯಿಂದ ತೆರವಾಗಿರುವ ಚಿಂಚೋಳಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಲಾಬಿ ತೀವ್ರಗೊಂಡಿದೆ.
ರಾಜೀನಾಮೆ ನೀಡಿರುವುದರಿಂದ ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂಬ ವಾದವನ್ನು ಉಮೇಶ್ ಜಾಧವ್ ಮುಂದಿಟ್ಟಿದ್ದಾರೆ. ಈ ನಡುವೆ ಸುನಿಲ್ ವಲ್ಯಾಪುರೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ಇನ್ನಿಲ್ಲದ ಲಾಬಿ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಯ ವರಿಷ್ಠ ನಾಯಕರು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಯಾರಿಗೆ ಕೊಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಮತ್ತೊಂದು ಬೆಳವಣಿಗೆಯಲ್ಲಿ ಸರ್ಕಾರದ ಮಾಜಿ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಗಂಭೀರ ಚಿಂತನೆ ಮಾಡಿದ್ದಾರೆ ಎಂದು ವರದಿಯಾಗಿತ್ತು. ಇದಕ್ಕೂ ಮುನ್ನ ಅವರು ಚಾಮರಾಜನಗರ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು.
ಆದರೆ ಕೊನೆ ಗಳಿಗೆಯಲ್ಲಿ ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಅವರಿಗೆ ಬಿಜೆಪಿ ಮಣೆ ಹಾಕಿತ್ತು. ಈಗಾಗಲೇ ಚಿಂಚೋಳಿ ವಿಧಾನಸಭೆ ಉಪಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು ಮೇ 19 ರಂದು ಚುನಾವಣೆ ನಡೆಯಲಿದೆ.

