ಚಿಂಚೋಳಿ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಜಾಧವ್ - ವಲ್ಯಾಪುರೆ ನಡುವೆ ಭಾರೀ ಪೈಪೋಟಿ

ಲೋಕಸಭಾ ಚುನಾವಣೆ ಬಳಿಕ ಉಪ ಚುನಾವಣೆ ಬಿರುಸುಗೊಂಡಿದೆ. ಚಿಂಚೋಳಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು...
ಉಮೇಶ್ ಜಾಧವ್, ಸುನೀಲ್ ವಲ್ಯಾಪುರೆ
ಉಮೇಶ್ ಜಾಧವ್, ಸುನೀಲ್ ವಲ್ಯಾಪುರೆ
ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ಉಪ ಚುನಾವಣೆ ಬಿರುಸುಗೊಂಡಿದೆ. ಚಿಂಚೋಳಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಇಬ್ಬರು ಪ್ರಮುಖ ನಾಯಕರ ನಡುವೆ ಭಾರೀ ಪೈಪೊಟಿ ಆರಂಭವಾಗಿದೆ.
ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ತಮ್ಮ ಸಹೋದರ ಅಥವಾ ಪುತ್ರನಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಆದರೆ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಶತಾಯಗತಾಯ ಟಿಕೆಟ್ ಪಡೆದೇ ತೀರಬೇಕೆಂದು ಹಠಕ್ಕೆ ಬಿದ್ದಿದ್ದಾರೆ.
ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಗೆ ಟಿಕೆಟ್ ನೀಡಲು ತೀರ್ಮಾನಿಸಿದ್ದು, ಈ ಸಂಬಂಧ ರಾಷ್ಟ್ರೀಯ ವರಿಷ್ಠ ಮಂಡಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ರವಾನಿಸಲಾಗಿದೆ.
ರಾಮಚಂದ್ರ ಜಾಧವ್ ಗೆ ಟಿಕೆಟ್ ನೀಡುವ ಮಾಹಿತಿಯಿಂದ ಆತಂಕಗೊಂಡಿರುವ ಮಾಜಿ ಸಚಿವ ಸುನೀಲ್ ವಲ್ಯಾಪುರೆ ತಮಗೇ ಟಿಕೆಟ್ ಸಿಗಬಹುದೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೂ ನಿನ್ನೆಯ ಬೆಳವಣಿಗೆಯಿಂದ ಬೇಸರಗೊಂಡಿರುವ ಸುನೀಲ್ ವಲ್ಯಾಪುರೆ ನಾಳೆ ಚಿಂಚೋಳಿ ಕ್ಷೇತ್ರಕ್ಕೆ ತೆರಳುತ್ತಿದ್ದು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆ ಕರೆದಿದ್ದಾರೆ.
ಪಕ್ಷದ ವರಿಷ್ಠರು ರಾಮಚಂದ್ರ ಜಾಧವ್ ಗೆ ಟಿಕೆಟ್ ನೀಡಿದರೆ ಸುನಿಲ್ ವಲ್ಯಾಪುರೆ ಬಂಡಾಯವೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಪಕ್ಷ ಟಿಕೆಟ್ ನೀಡುವವರನ್ನು ಗೆಲ್ಲಿಸುವ ಜವಾಬ್ದಾರಿ ತಮ್ಮದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್ ವಲ್ಯಾಪುರೆ, ನಾಳೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ, ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ತಾವು ಬದ್ದ ಎಂದು ತಿಳಿಸಿದ್ದಾರೆ. ಆ ಮೂಲಕ ಟಿಕೆಟ್ ಕೈ ತಪ್ಪಿದರೆ ಬಂಡಾಯ ಖಚಿತ ಎಂಬ ಸಂದೇಶವನ್ನು ಬಿಜೆಪಿ ನಾಯಕರಿಗೆ ರವಾನಿಸಿದ್ದಾರೆ.
ಚುನಾವಣಾ ಮುಖಂಡರ ಸಭೆಗೂ ಮುನ್ನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಉಮೇಶ್ ಜಾಧವ್, ತಾವು ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿಲ್ಲ. ಅದಕ್ಕಾಗಿ ಲಾಭಿಯನ್ನು ನಡೆಸಿಲ್ಲ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದ್ದೇನೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ದ ಕುಟುಂಬ ರಾಜಕಾರಣ ಆರೋಪ ಮಾಡಿದ ನೀವೇ ಕುಟುಂಬ ರಾಜಕಾರಣ ಪ್ರೋತ್ಸಾಹಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಾಧವ್, ಎಲ್ಲಾ ಹಿರಿಯರನ್ನು ಕಡೆಗಣಿಸಿ ಕಿರಿಯರಾದ ಪ್ರಿಯಾಂಕ್ ಖರ್ಗೆಗೆ ಅಧಿಕಾರ ನೀಡಿರುವುದನ್ನು ಮಾತ್ರ ವಿರೋಧಿಸಿದ್ದೇನೆ. ಆದರೆ ಕುಟುಂಬ ರಾಜಕಾರಣವನ್ನು ವಿರೋಧಿಸಿಲ್ಲ ಎಂದು ಹೇಳುವ ಮೂಲಕ ತಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್ ಗೆ ಪಟ್ಟು ಹಿಡಿದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com