ಹಣೆಬರಹ ತಪ್ಪಿಸಲು ಆಗುವುದಿಲ್ಲ, ಅದರಂತೇ ಎಲ್ಲವೂ ನಡೆಯತ್ತೆ: ಡಿಕೆಶಿ

ಹಣೆಬರಹದಲ್ಲಿ ಬರೆದಿರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಹಣೆಬರಹದಲ್ಲಿ ಬರೆದಂತೆಯೇ ಎಲ್ಲವೂ ನಡೆಯುತ್ತದ ಹಣೆಬರಹದಲ್ಲಿ ಬರಹದಲ್ಲಿ ನಂಬಿಕೆ ಇಟ್ಟುಕೊಂಡು ಬದುಕುತ್ತಿರುವುದಾಗಿ ಮಾಜಿ ಸಚಿವ ಡಿ ಕೆ ಶಿವಕುಮಾರ್ ‍ಅಭಿಪ್ರಾಯಪಟ್ಟಿದ್ದಾರೆ.
ಡಿ ಕೆ ಶಿವಕುಮಾರ್ ‍
ಡಿ ಕೆ ಶಿವಕುಮಾರ್ ‍
Updated on

ಬೆಂಗಳೂರು: ಹಣೆಬರಹದಲ್ಲಿ ಬರೆದಿರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಹಣೆಬರಹದಲ್ಲಿ ಬರೆದಂತೆಯೇ ಎಲ್ಲವೂ ನಡೆಯುತ್ತದ ಹಣೆಬರಹದಲ್ಲಿ ಬರಹದಲ್ಲಿ ನಂಬಿಕೆ ಇಟ್ಟುಕೊಂಡು ಬದುಕುತ್ತಿರುವುದಾಗಿ ಮಾಜಿ ಸಚಿವ ಡಿ ಕೆ ಶಿವಕುಮಾರ್ ‍ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರ ಸ್ಥಾನದ ಬಗ್ಗೆ ಪಕ್ಷದಲ್ಲಿ ಇನ್ನೂ ಯಾವುದೇ ಸ್ಪಷ್ಟ ತೀರ್ಮಾನವಾಗಿಲ್ಲ, ಪ್ರತಿಪಕ್ಷ ನಾಯಕನಾಗುವ ತರಾತುರಿಯಲ್ಲಿಯೂ ತಾವು ಇಲ್ಲ. ಚುನಾವಣೆಯಲ್ಲಿ ಸೋತವರೇ ಸಚಿವರು, ಉಪಮುಖ್ಯಮಂತ್ರಿಗಳಾಗಿದ್ದಾರೆ. ಇಂತಹ ಗ್ರಹಚಾರ ತಮಗಿಲ್ಲ ಎಂದ ಅವರು, ತಾವು ಯಾವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಮಾಧ್ಯಮಗಳು ಹೇಳುವಂತೆ ತಾವು ಎಲ್ಲಿಗೂ ಲಾಬಿಮಾಡಲು ಹೋಗಿಲ್ಲ. ಯಾವುದನ್ನೂ ಕಾಡಿಬೇಡಿ ಪಡೆಯಲು ಸಾಧ್ಯವಿಲ್ಲ. ಲಾಬಿ ಮಾಡುವ, ಸ್ವವಿವರ ಕೊಡುವ ಅಗತ್ಯವೂ ಇಲ್ಲ. ಪಕ್ಷ ಹಾಗೂ ಗಾಂಧಿ ಕುಟುಂಬದ ಮೇಲೆ ನಂಬಿಕೆ ಇರುವ ತಮಗೆ ಹೈಕಮಾಂಡ್ ಯಾವುದೇ ಹುದ್ದೆಯನ್ನೂ ಕೊಟ್ಟರೂ ಅದನ್ನು ಪ್ರಸಾದ ಎಂದು ಸ್ವೀಕರಿಸುವುದಾಗಿ ಹೇಳಿದರು.

" ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ವಿರುದ್ಧ ನಾನೆಂದೂ ಆರೋಪ ಮಾಡಿಲ್ಲ, ಅವರಿಗೆ ನಾನು ಟಾಂಗ್ ನೀಡಿಲ್ಲ, ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ವಿರೋಧ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತೇನೆಯೇ ಹೊರತು, ನಮ್ಮ ಪಕ್ಷದ ನಾಯಕರ ಬಗ್ಗೆ ನಾನು ಎಂದಿಗೂ ಮಾತನಾಡುವುದಿಲ್ಲ. ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಸ್ವಪಕ್ಷದ ನಾಯಕರ ವಿರುದ್ಧ ಯಾವುದೇ ಕಾರಣಕ್ಕೂ ಮಾತನಾಡುವುದಿಲ್ಲ" ಎಂದು ಡಿಕೆಶಿ ಹೇಳಿದರು.

"ಸಿದ್ದರಾಮಯ್ಯನವರಿಗೆ ಕಾರು, ಮನೆ, ರಾಜಕೀಯ ಇಲ್ಲವೇ? 10 ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಗಳಾಗಿ, ಶಾಸಕಾಂಗ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ನಾನು ಏಕೆ ಟಾಂಗ್ ನೀಡಬೇಕು? ವಿರೋಧ ಪಕ್ಷದಲ್ಲಿ ನಾನು ಯಾರಿಗೆ ಟಾಂಗ್ ಕೊಡಬೇಕೋ ಅವರಿಗೆ ಕೊಟ್ಟಿದ್ದೇನೆ. ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಹಿಂದೆ ಭಿನ್ನಾಭಿಪ್ರಾಯ ಇದ್ದಾಗ ಹೋರಾಟ ಮಾಡಿದ್ದೇವೆ. ಈಗ ಅವರ ಜತೆ ಕೆಲಸ ಮಾಡಿದ ಮೇಲೆ ಅವರ ಬಗ್ಗೆ ಮಾತನಾಡಲು ತಲೆ ಕೆಟ್ಟಿಲ್ಲ. ನಮ್ಮ ನಡುವೆ ಏನೇ ರಾಜಕೀಯ ವ್ಯತ್ಯಾಸ ಬಂದರೂ ನಮ್ಮ ಪಕ್ಷದ ನಾಯಕರ ಬಗ್ಗೆ ನಾನು ಆ ರೀತಿ ಮಾತನಾಡುವುದಿಲ್ಲ" ಎಂದರು.

ಕೆಪಿಸಿಸಿ ವಿಸರ್ಜನೆಯಾಗಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನೇ ಕೇಳಬೇಕು. ತಾವು ಪಕ್ಷದ ಕಾರ್ಯಕರ್ತ ಮಾತ್ರ ಎಂದರು.

ಈಗಾಗಲೇ ನಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಮಾತಿಗೆ ತಪ್ಪಿ ನಡೆದುಕೊಂಡು, ಆತುರಾತುರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿರುವ ಯಡಿಯೂರಪ್ಪ ಅವರ ಸರ್ಕಾರದ ವೈಫಲ್ಯಗಳ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಲಾಗುತ್ತಿದೆ.

ನೆರೆಯಿಂದ ರಸ್ತೆಗೆ ಬಿದ್ದಿರುವ ಸಂತ್ರಸ್ತರಿಗೆ ನೆರವಾಗಲು ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಅವರು ಈಗಾಗಲೇ ಹೇಳಿರುವಂತೆ ಮನೆ ಬಾಡಿಗೆಗೆ 5 ಸಾವಿರ, ಮನೆ ಕಟ್ಟಲು 5 ಲಕ್ಷ ನೀಡಿಲ್ಲ. ಆದಷ್ಟು ಬೇಗ ಆ ಜನರ ನೋವಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಶಿವಳ್ಳಿ ಕ್ಷೇತ್ರ ಕುಂದಗೋಳಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಪ್ರವಾಹ ಸಂತ್ರಸ್ತರಿಗೆ ತುರ್ತಾಗಿ ಪರಿಹಾರ ನೀಡುವ ಕಾರ್ಯ ಆಗಿತ್ತು. ಆದರೆ ಬೆಳಗಾವಿಗೆ ಹೋದರೆ ಒಂದೇ ಒಂದು ರೂಪಾಯಿ ಕೂಡ ಇಂದಿಗೂ ಕೊಟ್ಟಿಲ್ಲ. ಕುಮಾರಸ್ವಾಮಿ ಅವರು ಬಹುಮತ ಸಾಬೀತು ಪಡಿಸುವ ಮುನ್ನವೇ ರೈತರ ಸಾಲಮನ್ನಾ ಎಂದು ಆತುರಪಡಿಸಿದ್ದ ಯಡಿಯೂರಪ್ಪ, ಸದ್ಯಕ್ಕೆ ಬೀದಿಗೆ ಬಿದ್ದಿರುವ ಪ್ರವಾಹ ಸಂತ್ರಸ್ತರಿಗೆ ತಾವು ಕೊಟ್ಟ ಮಾತಿನಂತೆ ಪರಿಹಾರ ನೀಡಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಲು ಬಿಡುವುದಿಲ್ಲ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ್ದೇ ಇರಲೀ ಅಥವಾ ಸಿದ್ದರಾಮಯ್ಯ ಅವರ ಸರ್ಕಾರದ ಕಾರ್ಯಕ್ರಮಗಳೇ ಇರಲೀ ಯಾವುದನ್ನೂ ರದ್ದು ಮಾಡಬಾರದು. ಒಂದು ವೇಳೆ ಬಿಜೆಪಿ ಸರ್ಕಾರ ಯೋಜನೆಗಳನ್ನು ರದ್ದು ಮಾಡಲು ಹೋದಲ್ಲಿ ಕಾಂಗ್ರೆಸ್‍ನ ಶಾಸಕರ ಜೊತೆ ಜೆಡಿಎಸ್ ನ 34 ಶಾಸಕರೂ ಸಹ ಹೋರಾಟ ಮಾಡಲಿದ್ದಾರೆ. ಮೈತ್ರಿ ಮುಂದುವರಿಯುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಆದರೆ ಮೈತ್ರಿ ಸರ್ಕಾರದಲ್ಲಿನ ಕಾರ್ಯಕ್ರಮವನ್ನು ನಿಲ್ಲಿಸಲು ಈ ಸರ್ಕಾರ ಮುಂದಾದರೆ ಅದರ ವಿರೋಧ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com