ಶ್ರೀರಾಮುಲು ಕೈತಪ್ಪಲಿದೆಯೇ ಭದ್ರಕೋಟೆ ಬಳ್ಳಾರಿ?

ಮೊನ್ನೆ ಆಗಸ್ಟ್ 20ರಂದು ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಂಪುಟಕ್ಕೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವಾಗ ಬಿ ಶ್ರೀರಾಮುಲು ಪ್ರಮಾಣವಚನ ಸ್ವೀಕರಿಸಿದ್ದು ಬಳ್ಳಾರಿ ಶ್ರೀರಾಮುಲು ಎಂಬ ಹೆಸರಿನಲ್ಲಿ. 
ಬಿ ಶ್ರೀರಾಮುಲು
ಬಿ ಶ್ರೀರಾಮುಲು

ಬೆಂಗಳೂರು: ಮೊನ್ನೆ ಆಗಸ್ಟ್ 20ರಂದು ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟಕ್ಕೆ ಸಚಿವರಾಗಿ ಬಿ ಶ್ರೀರಾಮುಲು ಪ್ರಮಾಣವಚನ ಸ್ವೀಕರಿಸಿದ್ದು ಬಳ್ಳಾರಿ ಶ್ರೀರಾಮುಲು ಎಂಬ ಹೆಸರಿನಲ್ಲಿ. 


ಗಣಿಧಣಿಗಳ ಭದ್ರಕೋಟೆ ಎಂದೇ ಕರೆಯುತ್ತಿದ್ದ ಬಳ್ಳಾರಿಯಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಶ್ರೀರಾಮುಲು ಈಗ ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುತ್ತಾರೆ ಎಂದೇ ಇಷ್ಟು ದಿನ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ ಅವರಿಗೆ ಆರೋಗ್ಯ ಸಚಿವ ಖಾತೆ ಕೊಟ್ಟು ಹೈಕಮಾಂಡ್ ಸುಮ್ಮನಾಗಿದೆ.


ತಮ್ಮ ನಾಯಕನಿಗೆ ಸೂಕ್ತ ಪ್ರಾತಿನಿಧ್ಯ ಸಿಗಲಿಲ್ಲವೆಂದು ಬಳ್ಳಾರಿ, ರಾಯಚೂರು, ಚಿತ್ರದುರ್ಗ ಭಾಗಗಳಲ್ಲಿ ಶ್ರೀರಾಮುಲು ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಶ್ರೀರಾಮುಲು ಎಲ್ಲಿಯೂ ಇಲ್ಲಿಯವರೆಗೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಪರವಾಗಿ ಹೈಕಮಾಂಡ್ ವಿರುದ್ಧ ಪ್ರತಿಭಟನೆ ಮಾಡಬೇಡಿ ಎಂದಿದ್ದಾರೆ ಶ್ರೀರಾಮುಲು. 


ಹಿಂದೆ ಬಳ್ಳಾರಿ ರೆಡ್ಡಿ ಸೋದರರ ಜೊತೆ ಶ್ರೀರಾಮುಲು ಸಂಬಂಧ ಚೆನ್ನಾಗಿದ್ದಾಗ ಪರಿಸ್ಥಿತಿಯೆಲ್ಲವೂ ಸರಿಯಾಗಿಯೇ ಇತ್ತು. ನಂತರ ಅವರ ಮಧ್ಯೆ ಸಂಬಂಧ ಹಳಸಿದಾಗ ಶ್ರೀರಾಮುಲು ಅಧಿಪತ್ಯ ಸಾಧಿಸಲು ಮುಂದಾದರು. ಇದೀಗ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೊಡಿ ಎಂದು ಯಡಿಯೂರಪ್ಪನವರ ಮೇಲೆ ಶ್ರೀರಾಮುಲು ಒತ್ತಡ ಹಾಕುತ್ತಿದ್ದಾರೆ. 


ಈ ಬಗ್ಗೆ ಶ್ರೀರಾಮುಲು ಅವರನ್ನು ಸಂಪರ್ಕಿಸಿ ಕೇಳಿದಾಗ, ನಾನು ಹುಟ್ಟಿ ಬೆಳೆದಿದ್ದು ಬಳ್ಳಾರಿಯಲ್ಲಿ. ಹಾಗಾಗಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನ ನನಗೆ ಕೊಟ್ಟರೆ ಒಳ್ಳೆಯದು. ನನಗೆ ಆ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆಯಿದೆ ಎನ್ನುತ್ತಾರೆ, ಆದರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಶ್ರೀರಾಮುಲು ಅವರನ್ನು ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com