ಉಪಚುನಾವಣೆ- ಜಣ ಜಣ ಕಾಂಚಾಣ ಸದ್ದು! ಹಣದ ಹೊಳೆ
ಬೆಂಗಳೂರು: ರಾಜ್ಯದಲ್ಲಿನ 15 ವಿಧಾನಸಭಾ ಉಪ ಚುನಾವಣೆಗೆ ಕೇವಲ ಮೂರು ದಿನ ಬಾಕಿ ಇರುವಂತೆಯೇ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಡಿಸೆಂಬರ್ 5 ರಂದು ನಡೆಯಲಿರುವ ಉಪ ಚುನಾವಣೆ ಬಿಎಸ್ ಯಡಿಯೂರಪ್ಪ ಸರ್ಕಾರದ ಅಸ್ತಿತ್ವದ ಪ್ರಶ್ನೆಯಾಗಿದ್ದು, ಹಣವನ್ನು ಹೊಳೆಯಾಗಿ ಹರಿಸಲಾಗುತ್ತಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2018ರ ವಿಧಾನಸಭಾ ಚುನಾವಣೆಯಲ್ಲಿ 393 ಕೋಟಿ ತೆರಿಗೆದಾರರ ಹಣವನ್ನು ವೆಚ್ಚಮಾಡಲಾಗಿತ್ತು. ಇದಾದ ಒಂದೂವರೆ ವರ್ಷಗಳ ನಂತರ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆಗಾಗಿ ಅಂದಾಜು 26. 32 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ಬಂಡಾಯ ಅಭ್ಯರ್ಥಿಗಳ ರಾಜೀನಾಮೆಯಿಂದ ನಡೆಯುತ್ತಿರುವ ಉಪ ಚುನಾವಣೆಗಾಗಿ ರಾಜಕೀಯ ವಿಶ್ಲೇಷಕರು, ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮೂಡಿದೆ. ಉಪ ಚುನಾವಣೆಗಾಗಿ ಸಾರ್ವಜನಿಕ ಹಣವನ್ನು ವ್ಯರ್ಥ್ಯ ಮಾಡಲಾಗುತ್ತಿದೆ. ಕುದುರೆ ವ್ಯಾಪಾರ ಮೂಲಕ ಬಲವಂತಾಗಿ ಬಂದಂತಹ ಚುನಾವಣೆ ಇದಾಗಿದ್ದು, ಅಂತಹ ಅಭ್ಯರ್ಥಿ ಅಥವಾ ಪಕ್ಷಗಳ ಮೇಲೂ ಪರಿಣಾಮ ಬೀರಲಿದೆ ಎಂದು ಕರ್ನಾಟಕ ವಿವಿ ರಾಜಕೀಯ ತಜ್ಞ ಡಾ. ಹರೀಶ್ ರಾಮಸ್ವಾಮಿ ಅಭಿಪ್ರಾಯಪಡುತ್ತಾರೆ.
2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ 122 ಕೋಟಿ, ಕಾಂಗ್ರೆಸ್ 34 ಕೋಟಿ ವೆಚ್ಚ ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿತ್ತು. ಜೆಡಿಎಸ್ ಯಾವುದೇ ಮಾಹಿತಿ ನೀಡಿರಲಿಲ್ಲ
ಖರ್ಚು ಮಾಡಲಾದ ಹಣ: ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಬಿಜೆಪಿ ಅಂದಾಜು 54 ಲಕ್ಷ , ಕಾಂಗ್ರೆಸ್ 15 ಲಕ್ಷ ವೆಚ್ಚ ಮಾಡಲಾಗಿತ್ತು. ಇದಲ್ಲದೇ ಅಭ್ಯರ್ಥಿಗಳು ಎಷ್ಟು ಹಣ ವೆಚ್ಚ ಮಾಡಿದ್ದರು ಎಂಬುದು ತಿಳಿದುಬಂದಿಲ್ಲ. ಅಭ್ಯರ್ಥಿಗಳು ತಾವು ಮಾಡಿರುವ ಖರ್ಚು ವೆಚ್ಚಗಳನ್ನು ಚುನಾವಣಾ ಆಯೋಗಕ್ಕೆ ತಿಳಿಸಿದ್ದರೂ ಅವೆಲ್ಲಾ ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಇದರ ಹೊರತಾಗಿಯೂ 2018ರ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ 93 ಕೋಟಿ ನಗದು, 66. 48 ಕೋಟಿ ಮೌಲ್ಯದ ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿತ್ತು.
ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಹೆಚ್ ವಿಶ್ವನಾಥ್ 20, 83, 108 ರೂ ವೆಚ್ಚ ಮಾಡಿದ್ದರೆ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುನಿರತ್ನ 20, 75, 847 ರೂ ವೆಚ್ಚ ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದರು.
ಆದರೆ, ಉಪ ಚುನಾವಣೆಯಲ್ಲಿ ಮತಗಳಿಗೆ ನೀಡಿರುವ ದುಡ್ಡಿನ ಮೊತ್ತ ಹೆಚ್ಚಾಗಿದ್ದು, ಜನರಲ್ ಚುನಾವಣೆಯಂತೆ ಒಂದು ವೋಟಿಗೆ 200ರಿಂದ 500 ರೂ. ನೀಡಲಾಗುತ್ತಿದೆ. ಅಭ್ಯರ್ಥಿಗಳ ಮೇಲೆ ಇದು ಅವಲಂಬಿತವಾಗಿತ್ತು, ಇದು 500 ರಿಂದ 5000 ಕ್ಕೂ ತಲುಪಬಹುದಾಗಿದೆ ಎಂದು ಪ್ರಸ್ತುತ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ರಾಷ್ಟ್ರೀಯ ಪಕ್ಷವೊಂದರ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಉಪ ಚುನಾವಣೆ ಪ್ರಚಾರದ ಅಖಾಡದಲ್ಲಿ ಅಪಾರ ಪ್ರಮಾಣದ ನಗದು, ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದ್ದು, ಇದನ್ನು ತಡೆಗಟ್ಟುವುದು ಸವಾಲಿನ ಕೆಲಸವಾಗಿದೆ. ಅಭ್ಯರ್ಥಿಗಳ ಎಲ್ಲಾ ನಗದು ವ್ಯವಹಾರವನ್ನು ನಿರ್ಬಂಧಿಸಲಾಗಿದೆ. ಅಕ್ರಮ ಮತದಾನ ಮಾಡಿದರೆ ಮತದಾರರು ಹಾಗೂ ರಾಜಕೀಯ ಪಕ್ಷಗಳಿಗೆ ತೀವ್ರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸೂಚಿಸಲಾಗಿದೆ.
ಹಣ, ಬಟ್ಟೆ, ಮದ್ಯ, ಆಹಾರ, ಚಿನ್ನ, ಬೆಳ್ಳಿ, ಸರ್ಕಾರದ ಯೋಜನೆಗಳನ್ನು ತಲುಪಿಸುವುದಾಗಿ ಆಣೆ ಪ್ರಮಾಣ ಮಾಡಿಸಿಕೊಳ್ಳುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಸಾಗಿದೆ. ಕೇವಲ 15 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದರೂ ಸಾರ್ವಜನಿಕರ ಜೀಬಿಗೆ ಕತ್ತರಿ ಹಾಕಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ