ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು: ಸಿದ್ದು, ಎಸ್ ಆರ್ ಪಾಟೀಲ್ ಸ್ಥಾನ ಡೋಲಾಯಮಾನ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಪಾಲಿಗೆ ಅಳಿವು ಉಳಿವಿನ ಪ್ರತಿಷ್ಠೆಯಾಗಿದ್ದ ೧೫ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವುದು ಸಾಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪಾಲಾಗಿರುವ ಕೆಳಮನೆ....
ಎಸ್ ಆರ್ ಪಾಟೀಲ್ - ಸಿದ್ದರಾಮಯ್ಯ
ಎಸ್ ಆರ್ ಪಾಟೀಲ್ - ಸಿದ್ದರಾಮಯ್ಯ
Updated on

ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಪಾಲಿಗೆ ಅಳಿವು ಉಳಿವಿನ ಪ್ರತಿಷ್ಠೆಯಾಗಿದ್ದ ೧೫ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವುದು ಸಾಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪಾಲಾಗಿರುವ ಕೆಳಮನೆ ಮತ್ತು ಮೇಲ್ಮನೆ ಪ್ರತಿಪಕ್ಷ ಸ್ಥಾನಗಳು ಎಲ್ಲಿ ಕೈ ಬಿಡುತ್ತವೋ ಎನ್ನುವ ಹೊಸ ಚರ್ಚೆ ಕಾಂಗ್ರೆಸ್ ಪಾಳೆಯದಲ್ಲಿ ಇದೀಗ ಆರಂಭಗೊಂಡಿದೆ.

ರಾಜ್ಯದ ೧೫ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಉಪಚುನಾವವಣೆ ವೇಳೆಯಲ್ಲಿಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಬಾದಾಮಿ ಶಾಸಕರೂ ಆಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮೂಲ ಕಾಂಗ್ರೆಸ್ಸಿಗರಲ್ಲಿ ಉಂಟಾದ ಅಸಮಾಧಾನ ವ್ಯಾಪಕವಾಗಿತ್ತು. ಪಕ್ಷದಲ್ಲಿನ ಅಸಮಾಧಾನದ ಮಧ್ಯೆಯೇ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್  ಮತ್ತು ಪಟಾಲಂ ಕಟ್ಟಿಕೊಂಡು ಹದಿನೈದು ಕ್ಷೇತ್ರಗಳಲ್ಲಿ ಏಕಾಂಗಿ ಚುನಾವಣೆ ಪ್ರಚಾರ ನಡೆಸಿದ್ದರು. ಕನಿಷ್ಠ ೮-೧೦ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎನ್ನುವ ವಿಶ್ವಾಸದಲ್ಲಿದ್ದರು.

ಇದೀಗ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ಗೆ ದಕ್ಕಿದ್ದು ಕೇವಲ ಎರಡು ಸ್ಥಾನ ಮಾತ್ರ. ಪ್ರಸಕ್ತ ಫಲಿತಾಂಶದಿಂದಾಗಿ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯಲಿವೆ. ಸಿದ್ದರಾಮಯ್ಯ ಅವರು ಈಗಾಗಲೇ ಸೋಲಿನ ಹೊಣೆಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಹ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಅಲ್ಲದೆ ಮೂಲ ಕಾಂಗ್ರೆಸ್ಸಿಗರು ಮತ್ತು ಸಿದ್ದರಾಮಯ್ಯ ವಿರೋಧಿಗಳು ಪಕ್ಷದಲ್ಲಿ ತಮ್ಮ ಪ್ರಾಬಲ್ಯ ಮೆರೆಯುವ ಪ್ರಯತ್ನಕ್ಕೆ ಕೈಹಾಕುವ ಸಾಧ್ಯತೆಗಳು ಹೆಚ್ಚಾಗಿವೆ.

ಸಿದ್ದರಾಮಯ್ಯ, ದಿನೇಶ ಗುಂಡೂರಾವ್ ಮತ್ತು ಎಸ್.ಆರ್. ಪಾಟೀಲರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಚಟುವಟಿಕೆಗಳೂ ಇನ್ನಷ್ಟು ಹೆಚ್ಚಾಗಲಿವೆ. ಇವುಗಳೆಲ್ಲದರ ಪರಿಣಾಮ ಜಿಲ್ಲೆಯ ರಾಜಕಾರಣದ ಮೇಲಾಗಲಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮೇಲ್ಮನೆ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಬಾಗಲಕೋಟೆ ಜಿಲ್ಲೆಯವರಾಗಿದ್ದು, ಭಾರಿ ಪೈಪೋಟಿಯ ನಡುವೆ ಪ್ರತಿಪಕ್ಷ ಸ್ಥಾನಗಳನ್ನು ಗಿಟ್ಟಿಸಿದ್ದರು. ಇದರಿಂದಾಗಿ ರಾಜಕೀವಾಗಿ ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದಿದೆ. ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದರೂ ಕಾಂಗ್ರೆಸ್ ಪಾಳೆಯದಲ್ಲಿನ ಸಿದ್ದು ವಿರೋಧಿಗಳು ಸಾಕಷ್ಟು ಉತ್ಸಾಹದಲ್ಲಿದ್ದಾರೆ. ಉಪಚುನವಣೆ ಫಲಿತಾಂಶವನ್ನೇ ಅಸ್ತ್ರವಾಗಿಸಿಕೊಂಡು ಮೂವರನ್ನೂ ಬದಲಾಯಿಸಲು ಪಕ್ಷದ ಹೈಕಮಾಂಡ್ ಮೇಲೆ ಇನ್ನಿಲ್ಲದ ಒತ್ತಡಗಳನ್ನು ಹಾಕಬಹುದು ಎನ್ನುವ ಲೆಕ್ಕಾಚಾರಗಳಿವೆ.

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವಕಾಗಿನ ಆಂತರಿಕ ಅಸಮಾಧಾನ ಭುಗಿಲೆದ್ದು  ಜಿಲ್ಲೆಯ ಪಾಲಾಗಿರುವ ಎರಡೂ ಮನೆಗಳ ಪ್ರತಿಪಕ್ಷ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎನ್ನುವ ಆತಂಕ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕತರಲ್ಲಿ ಮನೆ ಮಾಡಲಾರಂಭಿಸಿದೆ. 

ಹಿರಿಯ ಮೂಲ ಕಾಂಗ್ರೆಸ್ಸಿಗರನ್ನೆಲ್ಲ ಹಿಂದಿಕ್ಕಿ ಏಕಾಂಗಿಯಾಗಿ ಉಪಚುನಾವಣೆ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಎಲ್ಲಿ ಮುಂದಿನ ದಿನಗಳಲ್ಲಿ ಒಬ್ಬಂಟಿ ಆಗಲಿದ್ದಾರೆ ಎನ್ನುವ ಭಯ ಅವರ ಬೆಂಬಲಿಗರದ್ದು.  ಸಿದ್ದರಾಮಯ್ಯ ಬಹಿರಂಗ ಪ್ರಚಾರ ಕೈಗೊಂಡ ವೇಳೆ  ಪಕ್ಷದ ಮುಖಂಡರ ನಡೆಯ ಬಗ್ಗೆ ಅನುಮಾನಗೊಂಡು ಉಪಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದರೆ ನಾನು ಹೊಣೆಯಲ್ಲ ಎನ್ನುವ ಸಂದೇಶವನ್ನು ಪಕ್ಷದ ಹೈಕಮಾಂಡ್‌ಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಒಟ್ಟಾರೆ ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಾಳೆಯಲ್ಲಿ ಸಾಕಷ್ಟು ಬೆಳವಣಿಗೆಗಳಿಗೆ ಕಾರಣವಾಗಲಿದೆಯಾದರೂ ಜಿಲ್ಲೆಗೆ ಸಿಕ್ಕಿರುವ ಪ್ರತಿಪಕ್ಷ ಸ್ಥಾನಗಳು ಏನಾಗುತ್ತವೋ ಎನ್ನುವುದು ಸದ್ಯದ ಕುತೂಹಲವಾಗಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯಲಿರುವ ಬೆಳೆವಣಿಗಳ ಮಧ್ಯೆಯೂ ಉಭಯ ಮನೆಗಳ ಪ್ರತಿಪಕ್ಷ ಸ್ಥಾನಗಳು ಜಿಲ್ಲೆಗೆ ಉಳಿದಲ್ಲಿ ಅದೊಂದು ಪವಾಡವಾಗಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

-ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com