
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಇಬ್ಬರು ಅಮಾಯಕರನ್ನು ರಾಜ್ಯ ಸರ್ಕಾರ ಗೋಲಿಬಾರ್ ನಡೆಸಿ 'ಬಲಿ' ತೆಗೆದುಕೊಂಡಿದ್ದು ಯಾವ ಕಾರಣಕ್ಕೆ? ಯಾರನ್ನು ಮೆಚ್ಚಿಸಲು ಇಂತಹ ಮತಿಗೇಡಿ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದು ಕೊಂಡಿದ್ದು ? ಎಂದು ಮಾಜಿ ಮುಖ್ಯಮಂತ್ರಿಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೆಚ್ಚಿಸಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಮಾಯಕರ ಮೇಲೆ ಗುಂಡು ಸಿಡಿಸಿತೆ?, ಅಧಿಕಾರಿಗಳು ತಾವಾಗಿಯೇ ಶಾಂತಿಯುತ ಪ್ರತಿಭಟನೆ ತಹಬದಿಗೆ ತರಲು ಅವಿವೇಕದ ನಿರ್ಧಾರ ಕೈಗೊಂಡರೋ? ರಾಜ್ಯ ಸರ್ಕಾರ ಶೌರ್ಯ ಪ್ರದರ್ಶನಕ್ಕೆ ಇಂತಹ ಆದೇಶ ನೀಡೀತೆ ? ಎಂದು ಅವರು ಪ್ರಶ್ನಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಸ್ಸಾಂನಲ್ಲಿ ಮೊದಲು ತೀವ್ರತರವಾದ ಪ್ರತಿಭಟನೆ ಆಕ್ರೋಶ, ಭುಗಿಲೆದ್ದಿತು. ಆದರೆ ಅಲ್ಲಿ ನಡೆಯದ ಗೋಲಿಬಾರ್ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದ ರಾಜ್ಯದಲ್ಲಿ ನಡೆದಿದ್ದಾದರೂ ಯಾಕೆ? ಅಮಾಯಕರ 'ರಕ್ತ ತರ್ಪಣ' ಕೊಡುವ ಮೂಲಕ ಯಾರಿಗೆ ಯಾವ ಸಂದೇಶ ರವಾನಿಸಿದಿರಿ ? ಎಂದು ಪ್ರಶ್ನಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯಾರೂ ಪ್ರತಿಭಟಿಸಲೇಬಾರದೆ? 4 ತಿಂಗಳ ಆಡಳಿತ ಅವಧಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ' ಪವಿತ್ರ ಸರ್ಕಾರ' ಮಾಡಲು ಹೊರಟಿರುವುದು ಏನು? ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಪ್ರತಿಭಟನೆಗೆ ನಿರ್ಬಂಧ ಹೇರಲು ಕಾರಣಗಳೇನು? ಇದರ ಹಿಂದಿರುವ ಹಕೀಕತ್ತಾದರೂ ಏನು? ಎಂದು ಕೇಳಿದ್ದಾರೆ.
Advertisement