ಮಂಡ್ಯ ಲೋಕಸಭೆ ಕ್ಷೇತ್ರ; ಇನ್ನೂ ಕುತೂಹಲ ಉಳಿಸಿಕೊಂಡಿರುವ ಸುಮಲತಾ ಸ್ಪರ್ಧೆ

ಮಂಡ್ಯ ಲೋಕಸಭೆ ಕ್ಷೇತ್ರವನ್ನು ಮೈತ್ರಿಪಕ್ಷ ಕಾಂಗ್ರೆಸ್ ಗೆ ಬಿಟ್ಟುಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ...
ಸುಮಲತಾ
ಸುಮಲತಾ

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರವನ್ನು ಮೈತ್ರಿಪಕ್ಷ ಕಾಂಗ್ರೆಸ್ ಗೆ ಬಿಟ್ಟುಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರೆ ಇತ್ತ ಮಾಜಿ ಕಾಂಗ್ರೆಸ್ ನಾಯಕ ಎಂ ಎಚ್ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಸಕ್ರಿಯ ರಾಜಕಾರಣಕ್ಕೆ ಬರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆಯವರೆಗೂ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅಂಬರೀಷ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಮಂಡ್ಯ ಜನತೆಗೆ ಮಾತ್ರ ಅಂಬರೀಷ್ ಮೇಲಿನ ಪ್ರೀತಿ, ಅಭಿಮಾನ ಕಡಿಮೆಯಾಗಿಲ್ಲ. ಬೆಂಗಳೂರಿನಲ್ಲಿರುವ ಅಂಬರೀಷ್ ನಿವಾಸಕ್ಕೆ ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರು ಭೇಟಿ ನೀಡಿ ಸುಮಲತಾ ಅವರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದೊಂದು ವಿಭಿನ್ನ ಸನ್ನಿವೇಶ. ಮಂಡ್ಯ ಜನತೆ ಅಂಬರೀಷ್ ಅವರಿಗೆ ಎಷ್ಟು ಪ್ರೀತಿ ತೋರಿಸಿದ್ದಾರೆ ಎಂದು ಗೊತ್ತು. ಅದು ನನಗೆ ಕೂಡ ಖುಷಿ ಕೊಟ್ಟಿದೆ. ಮಂಡ್ಯ ಜನತೆಗೆ ಅಂಬರೀಷ್ ಅವರನ್ನು ಕಳೆದುಕೊಂಡ ನೋವು ಇದೆ. ಇದೀಗ ಅವರ ಕೈ ಬಿಡದಂತೆ ನನ್ನನ್ನು ಕೇಳಿಕೊಳ್ಳುತ್ತಿದ್ದಾರೆ. ಅಂಬರೀಷ್ ಅವರಿಗೆ ನೀಡಿದ ಪ್ರೀತಿಯನ್ನೇ ನಮ್ಮ ಕುಟುಂಬಕ್ಕೂ ನೀಡುತ್ತಿದ್ದಾರೆ. ಮಂಡ್ಯದ ಜನತೆ ಭಾವನಾಜೀವಿಗಳಾಗಿದ್ದು ಕಳೆದ 20-25 ವರ್ಷಗಳಿಂದ ಅದೇ ಭಾವನೆಗಳನ್ನು ನಾವು ಕೂಡ ಆ ಜಿಲ್ಲೆಯ ಜೊತೆ ಇರಿಸಿಕೊಂಡಿದ್ದೇವೆ ಎಂದು ಸುಮಲತಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸುವ ಕುರಿತು ನಾನು ಇನ್ನೂ ನಿರ್ಧಾರ ಮಾಡಿಲ್ಲ, ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ ಎಂದರು. ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಗೆ ಬಳಸುವ ತಂತ್ರ ಮತ್ತು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಚರ್ಚಿಸುವಾಗ ಮಂಡ್ಯದಿಂದ ಸುಮಲತಾ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಮಾತು ಕಾಂಗ್ರೆಸ್ ನಾಯಕರ ಸಭೆಯಲ್ಲಿ ಚರ್ಚೆಗೆ ಬಂತು.

ಮಾಜಿ ಸಚಿವ ಎನ್ ಚೆಲುವರಾಯ ಸ್ವಾಮಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಬಾರದು, ಸುಮಲತಾ ಅವರನ್ನು ಕಣಕ್ಕಿಳಿಸಬೇಕು. ಅಂಬರೀಷ್ ಗೆ ಇಲ್ಲಿ ಅಪಾರ ಜನಬೆಂಬಲವಿದ್ದು ಅದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಕಾರಣವಾಗಲಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಮಂಡ್ಯ, ಹಾಸನ ಮತ್ತು ಮೈಸೂರು ಭಾಗದ ಕ್ಷೇತ್ರಗಳನ್ನು ಕಾಂಗ್ರೆಸ್ ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಸಿದ್ದರಾಮಯ್ಯ ಕೂಡ ನಿನ್ನೆ ಹೇಳಿದ್ದರು. ಈ ಬಗ್ಗೆ ಜೆಡಿಎಸ್ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಆದರೆ ಮಂಡ್ಯ ಕ್ಷೇತ್ರ ಬಿಟ್ಟುಕೊಡಲು ಜೆಡಿಎಸ್ ಕೂಡ ಸಿದ್ದವಿಲ್ಲ. ಜೆಡಿಎಸ್ ಕಾರ್ಯಕರ್ತರು ಮಂಡ್ಯ ಕ್ಷೇತ್ರದಲ್ಲಿ ಪಕ್ಷವನ್ನು ಬೆಳೆಸಿದ್ದಾರೆ. ಅವರ ಇಚ್ಛೆಗೆ ವಿರುದ್ಧವಾಗಿ ನಾವು ಹೋಗಲು ಹೇಗೆ ಸಾಧ್ಯ?, ಕಾಂಗ್ರೆಸ್ ನವರಿಗೆ ಇಚ್ಛೆಯಿದ್ದರೆ ಸುಮಲತಾ ಅವರಿಗೆ ಟಿಕೆಟ್ ನೀಡಲಿ ಎಂದು ಸಿಎಂ ಹೇಳಿದ್ದಾರೆ.

ಪ್ರಸ್ತುತ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ನ ಎಲ್ ಆರ್ ಶಿವರಾಮೇ ಗೌಡ ಸಂಸದರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com