ನಾವು ಭಿಕ್ಷುಕರಲ್ಲ: ಸ್ಥಾನ ಹೊಂದಾಣಿಕೆ ಕುರಿತು ಕಾಂಗ್ರೆಸ್ ಗೆ ಸಿಎಂ ಕುಮಾರಸ್ವಾಮಿ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಏಳೋ, ಐದೋ, ಮೂರೋ ಸೀಟು ಬಿಟ್ಟು ಕೊಡ್ತಾರೋ ಎಂಬುದು ಗೊತ್ತಿಲ್ಲ.
ಕುಮಾರಸ್ವಾಮಿ
ಕುಮಾರಸ್ವಾಮಿ
ಮೈಸೂರುಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಏಳೋ, ಐದೋ, ಮೂರೋ ಸೀಟು ಬಿಟ್ಟು ಕೊಡ್ತಾರೋ ಎಂಬುದು ಗೊತ್ತಿಲ್ಲ. ಆದರೆ ನಾವೇನು ಭಿಕ್ಷುಕರಲ್ಲ (ವಿ ಆರ್​​ ನಾಟ್​​ ಬೆಗ್ಗರ್ಸ್​) ಎಂದು ಕಾಂಗ್ರೆಸ್​ ನಾಯಕರ ಸೀಟು‌ ಹಂಚಿಕೆ ನಿರ್ಧಾರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಇದರಿಂದಾಗಿ ಎರಡು ಪಕ್ಷಗಳ ನಾಯಕರ ಜಟಾಪಟಿ ತೀವ್ರಗೊಂಡಿದೆ. 
ಮೈಸೂರು ನಗರದ ಹಳೆಯ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆಯಿಂದ ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಬೇಕಾದರೆ ಎಲ್ಲರೂ ಕುಳಿತು ಸ್ಥಾನ ಹಂಚಿಕೆ ಬಗ್ಗೆ ಚರ್ಚೆ ಮಾಡಬೇಕು. ರಾಜ್ಯದ ಅಭಿವೃದ್ಧಿಗಾಗಿ ಆಡಳಿತ ಕಡೆಗೆ ನಾನು ಗಮನ ಹರಿಸಿದ್ದೇನೆ. ಜೆಡಿಎಸ್​​ ವರಿಷ್ಠರಾದ ಹೆಚ್​​.ಡಿ. ದೇವೇಗೌಡರು ಕಾಂಗ್ರೆಸ್ ಪಕ್ಷ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ಸೀಟು ಹಂಚಿಕೆ ಮಾಡಿಕೊಳ್ಳುತ್ತಾರೆ. ಸದ್ಯ ಲೋಕಸಭಾ ಸೀಟು ಹಂಚಿಕೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ತಿಳಿಸಿದರು.
ಯಾರಿಗೆ ಯಾರು ಬೆಗ್ಗರ್ಸ್ ಅಲ್ಲ ಕುಮಾರಸ್ವಾಮಿ ಹೇಳಿಕೆಗೆ ಸಿದ್ದು ಪ್ರತಿಕ್ರಿಯೆ 
ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಸಂಬಂಧಿಸಿದಂತೆ ಯಾರು ಯಾರ ಬಳಿಯೂ ಭಿಕ್ಷೆ ಬೇಡುವ ಅಗತ್ಯ ಇಲ್ಲ. ರಾಜ್ಯದಲ್ಲಿ  ಮೈತ್ರಿ ಸರ್ಕಾರವಿದೆ. ಯಾರಿಗೆ ಯಾರು ಬೆಗರ್ಸ್ ಅಲ್ಲ. ಅವರು ಭಿಕ್ಷಕರಲ್ಲ, ನಾವು ಭಿಕ್ಷಕರಲ್ಲ ಎಂದು ತಿರುಗೇಟು ನೀಡಿದರು. 
ನಾವೇನು ಭಿಕ್ಷುಕರಲ್ಲ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಲೋಕಸಭಾ ಚುನಾವಣೆ ಸಂಬಂಧ ವಿವಿಧ ಸಮಿತಿ ಸಭೆಗಳನ್ನು ನಡೆಸಲಾಗಿದೆ. ಯಾವುದರ ಬಗ್ಗೆಯೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.ಆದರೆ ಕಾಂಗ್ರೆಸ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಹತ್ತು ಸ್ಥಾನಗಳನ್ನು ಉಳಿಸಿಕೊಳ್ಳಬೇಕು. ಯಾವುದೇ ಕ್ಷೇತ್ರಗಳನ್ನು ಬಿಟ್ಟುಕೊಡಬಾರದು, ಅದರಲ್ಲಿ ರಾಜಿ ಆಗಬಾರದು ಎಂದು  ತೀರ್ಮಾನಿಸಲಾಗಿದೆ ಎಂದು ಪಕ್ಷ ನಿಲುವನ್ನು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಹಾಗೇ ಯಾಕೆ ಹೇಳಿದ್ದಾರೆ ಎಂಬ ಬಗ್ಗೆ ತಮಗೆ  ಮಾಹಿತಿ ಇಲ್ಲ. ಕಾಂಗ್ರೆಸ್ 10, ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆದ್ದಿದ್ದು, ಉಳಿದ 16  ಕ್ಷೇತ್ರಗಳಲ್ಲಿ ಬಿಜೆಪಿ‌ ಸಂಸದರಿದ್ದಾರೆ. ಸೀಟು ಹಂಚಿಕೆ ಬಗ್ಗೆ  ಜೆಡಿಎಸ್ ನಾಯಕರ ಜೊತೆ ಚರ್ಚೆ ಮಾಡಬೇಕಿದೆ. ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ದೂರವಾಣಿಯಲ್ಲಿ ದಿನಾಂಕ ನಿಗದಿ ಬಗ್ಗೆ ಚರ್ಚಿಸಿದ್ದೇನೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 
ಮಾಜಿ ಪ್ರಧಾನಿ ದೇವೇಗೌಡರು ಗುವಾಹತಿಗೆ ತೆರಳಿದ್ದಾರೆ. ಅವರನ್ನು ನಾಳೆ ಸಂಜೆ ಭೇಟಿ ಮಾಡಿ ಸ್ಥಾನ ಹಂಚಿಕೆ ಚರ್ಚೆಸಿ ದಿನಾಂಕ ನಿಗದಿ ಮಾಡಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com