ಮೈಸೂರು ಜಿ.ಪಂ ' ಕೈ' ವಶ: ಬದ್ಧ ವೈರಿಗಳಿಗೆ 'ಸಿದ್ದು ಗುದ್ದು'; ಮೈತ್ರಿ ಧರ್ಮಕ್ಕೆ ಕಟ್ಟುಬಿದ್ದ ಜೆಡಿಎಸ್ ನಿಂದ ಬಿಜೆಪಿಗೆ ದ್ರೋಹ?

ತಡರಾತ್ರಿ ನಡೆದ ಅಚ್ಚರಿಯ ಬೆಳವಣಿಗೆ ನಂತರ ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಅಧಿಕಾರ ಹಿಡಿಯುವಲ್ಲಿ ..
ಬದ್ಧ ವೈರಿಗಳಿಗೆ 'ಸಿದ್ದು ಗುದ್ದು'
ಬದ್ಧ ವೈರಿಗಳಿಗೆ 'ಸಿದ್ದು ಗುದ್ದು'
ಮೈಸೂರು: ತಡರಾತ್ರಿ ನಡೆದ ಅಚ್ಚರಿಯ ಬೆಳವಣಿಗೆ ನಂತರ ಮೈಸೂರು ಜಿಲ್ಲಾ ಪಂಚಾಯತ್  ನಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಅಧಿಕಾರ ಹಿಡಿಯುವಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಶನಿವಾರ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಸ್ಥಳೀಯ ಜೆಡಿಎಸ್ ನಾಯಕರು ಹಿಂದಿನಂತೆ ಬಿಜೆಪಿ ಜೊತೆ ಮೈತ್ರಿ ಮುಂದುವರಿಸಿಕೊಂಡು ಹೋಗುವುದಾಗಿ ಘೋಷಿಸಿದ್ದರು  
ಜಿಲ್ಲಾ ಪಂಚಾಯತ್ ಅಧಿಕಾರ ಅವಧಿ ಇನ್ನೂ 26 ತಿಂಗಳು ಬಾಕಿಯಿದೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದ ತಮ್ಮ ಬದ್ದ ವೈರಿಗಳಾದ ಜೆಡಿಎಸ್ ನ ಜಿ.ಟಿ ದೇವೇಗೌಡ ಮತ್ತು ಸಾ,ರಾ ಮಹೇಶ್ ಗೆ ಸಿದ್ದರಾಮಯ್ಯ ಸರಿಯಾದ ಪೆಟ್ಟು ನೀಡಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮುಂದುವರಿಸುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಘೋಷಿಸಿದ್ದರು. ಆದರೇ ಕೊನೆ ಕ್ಷಣದಲ್ಲಿ ಜೆಡಿಎಸ್ ನಾಯಕ ಮಾಜಿ ಪ್ರಧಾನಿ ದೇವೇಗೌಡ ಮನವೊಲಿಸಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. 
49 ಸಂಖ್ಯೆಯ ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ  ಕಾಂಗ್ರೆಸ್ 22 ಸದಸ್ಯರನ್ನು ಹೊಂದಿದೆ. ಜಿ.ಪಂ ಅಧಿಕಾರ ಪಡೆಯಲು ಅಖಾಡ ಸಿದ್ಧಪಡಿಸುವಂತೆ ಸಿದ್ದಕಾಮಯ್ಯ  ಸ್ಥಳೀಯ ನಾಯಕರುಗಳಿಗೆ ಸೂಚಿಸಿದ್ದರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ,ಸಿ ವೇಣುಗೋಪಾಲ್ ಜೊತೆ ಮಾಜಿ ಪ್ರದಾನಿ ದೇವೇಗೌಡರನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಧರ್ಮವನ್ನು ಪಾಲಿಸುವಂತೆ ಹೇಳಿದ್ದಾರೆ.
ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಜೊತೆ ಮೈತ್ರಿ ಮುಂದುವರಿಸುವುದು ಸರಿಯಲ್ಲ, ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಇದರ ಲಾಭ ಪಡೆಯುತ್ತದೆ ಎಂದು ಹೇಳಿದ್ದಾರೆ.
ಆರಂಭದಲ್ಲಿ ದೇವೇಗೌಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡಲು ನಿರ್ಧರಿಸಿದ್ದರು,. ಈ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್  ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್, ಕುಂಚಟಿಗ ಸಮುದಾಯದ ಮಹಿಳೆಗೆ ಅಧ್ಯಕ್ಷೆಯಾಗುವ ಅವಕಾಶ ಒದಗಿಸಿಕೊಟ್ಟಿದ್ದಾರೆ, ತಡರಾತ್ರಿ ನಡೆದ ಬೆಳವಣಿಗೆಗಳಿಂದಾಗಿ ಜೆಡಿಎಸ್ ಗೆ ಬೇರೆ ಯಾವುದೇ ಆಯ್ಕೆಗೆ ಅವಕಾಶವಿಲ್ಲದೇ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಕೈ ಜೋಡಿಸಬೇಕಾಯಿತು.
ಮೊದಲ ಅರ್ಧ ಅವಧಿಗೆ ಬೆಂಬಲ ನೀಡಿದ್ದ ಬಿಜೆಪಿ ಸದಸ್ಯರ ಬಳಿ ಸಚಿವ ಸಾ.ರಾ ಮಹೇಶ್ ಕ್ಷಮೇ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ., ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಮೈಸೂರು ಜಿಪಂ ನಲ್ಲಿ ಅಧಿಕಾರ ಹಿಡಿಯು ವಿಫಲರಾಗಿದ್ದರು, ಆದರೆ ಶುಕ್ರವಾರ ನಡೆದ ದಿಡೀರ್ ಬೆಳವಣಿಗೆಗಳಿಂದಾಗಿ ಸಿದ್ದರಾಮಯ್ಯ ಪ್ರಾಬಲ್ಯ ಹೆಚ್ಚಾಗಿರುವುದು ಕಾಂಗ್ರೆಸ್ ನಾಯಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com