ಬೆಂಗಳೂರು: ಪ್ರತಿಪಕ್ಷ ಬಿಜೆಪಿ 'ಆಪರೇಷನ್ ಕಮಲ'ಕ್ಕೆ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಕರೆಯಲಾಗಿರುವ ಕಾಂಗ್ರೆಸ್ ವಿಶೇಷ ಶಾಸಕಾಂಗ ಪಕ್ಷದ ಸಭೆಗೆ ನಿರೀಕ್ಷೆಯಂತೆ ನಾಲ್ವರು ಅತೃಪ್ತ ಶಾಸಕರು ಗೈರುಹಾಜರಾಗಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದ್ದು, ಬಳ್ಳಾರಿ ಶಾಸಕ ಬಿ.ನಾಗೇಂದ್ರ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್ ಅವರು ಗೈರು ಆಗಿದ್ದಾರೆ.
ಅತೃಪ್ತ ಶಾಸಕರ ಗೈರು ಹಾಜರಿನಿಂದ ಕಾಂಗ್ರೆಸ್ ನಾಯಕರ ಕಂಗಾಲಾಗಿದ್ದು, ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ವಿಧಾನಸೌಧದಲ್ಲಿ ಆಯೋಜಿಸಲಾಗಿರುವ ಸಿಎಲ್ಪಿ ಸಭೆ ಒಂದು ಗಂಟೆ ತಡವಾಗಿ ಆರಂಭವಾಯಿತು. ಪಕ್ಷದ ಬಗ್ಗೆ ಅತೃಪ್ತಿ ಹೊಂದಿದ್ದರು ಎನ್ನಲಾದ ಬಸವರಾಜ್ ದಗ್ಗಲ್, ವಿ. ಮುನಿಯಪ್ಪ, ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ಬಿ.ಸಿ.ಪಾಟೀಲ್ ಸೇರಿದಂತೆ ಒಟ್ಟು 75 ಶಾಸಕರು ಸಭೆಗೆ ಹಾಜರಾಗಿದ್ದಾರೆ.
ಈ ಮಧ್ಯೆ ತುರ್ತು ಕಾರ್ಯ ನಿಮಿತ್ತ ಸಭೆಗೆ ಬರಲು ಸಾಧ್ಯವಾಗಿಲ್ಲ ಎಂದು ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ಸಿದ್ದರಾಮಯ್ಯ ಅವರಿಗೆ ಫ್ಯಾಕ್ಸ್ ಮಾಡಿದ್ದಾರೆ ಎನ್ನಲಾಗಿದೆ.