ಕಾಂಗ್ರೆಸ್ ನಾಯಕರ ಸಭೆ (ಸಂಗ್ರಹ ಚಿತ್ರ)
ಕಾಂಗ್ರೆಸ್ ನಾಯಕರ ಸಭೆ (ಸಂಗ್ರಹ ಚಿತ್ರ)

ಇಬ್ಬರು ಶಾಸಕರು ರಾಜೀನಾಮೆ: ಕಂಗೆಟ್ಟ ಕಾಂಗ್ರೆಸ್ ನಿಂದ ಸರಣಿ ಸಭೆ

ಕಾಂಗ್ರೆಸ್ ಶಾಸಕರ ರಾಜೀನಾಮೆ ಪರ್ವ ಆರಂಭವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಕಾಂಗ್ರೆಸ್ ಮುಖಂಡರು ಇದೀಗ ಮೈತ್ರಿ ಸರ್ಕಾರ...
Published on
ಬೆಂಗಳೂರು: ಕಾಂಗ್ರೆಸ್ ಶಾಸಕರ ರಾಜೀನಾಮೆ ಪರ್ವ ಆರಂಭವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಕಾಂಗ್ರೆಸ್ ಮುಖಂಡರು ಇದೀಗ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾರ್ಯತಂತ್ರ ಹೆಣೆಯುವಲ್ಲಿ ಮಗ್ನರಾಗಿದ್ದಾರೆ. 
ಇದಕ್ಕಾಗಿ ಸರಣಿ ಸಭೆಗಳ ಮೊರೆ ಹೋಗಿದ್ದು, ಅತೃಪ್ತ ಶಾಸಕರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 
ಸದಾಶಿವ ನಗರದ ಸಚಿವ ಡಿ ಕೆ ಶಿವಕುಮಾರ್ ನಿವಾಸದಲ್ಲಿ ಶಿವಕುಮಾರ್ - ಪರಮೇಶ್ವರ್ ನಡುವೆ ಮಹತ್ವದ ಸಮಾಲೋಚನೆ ನಡೆಯಿತು. ಬಳಿಕ ಮಾತನಾಡಿದ ಪರಮೇಶ್ವರ್, ರಾಜ್ಯ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ನಾಯಕರು ಒಂದು ವರ್ಷದಿಂದಲೂ ನಿರಂತರ ಪ್ರಯತ್ನ ನಡೆಸಿದ್ದರು. ಇದೀಗ ನಮ್ಮ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನು ಮನವೊಲಿಸುವ ಮೂಲಕ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತೇವೆ. ಕೆಲ ಶಾಸಕರು ರಾಜೀನಾಮೆ ನೀಡಿರಬಹುದು. ಆದರೆ ಮೈತ್ರಿ ಸರ್ಕಾರಕ್ಕೆ ಏನೂ ತೊಂದರೆ ಇಲ್ಲ ಎಂದರು. 
ಸಚಿವ ಡಿಕೆ ಶಿವಕುಮಾರ್ ಮಾತನಾಡಿ, ವಿಜಯನಗರ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಪಕ್ಷವನ್ನು ಬಿಟ್ಟು‌ ಹೋಗುವವರಲ್ಲ. ಅವರು ಪಕ್ಷದಲ್ಲಿಯೇ ಇರುತ್ತಾರೆ. ಕೆಲವೊಂದು ಕಾರಣಗಳಿಂದ ಅವರು ರಾಜೀನಾಮೆ ನೀಡಿರಬಹುದು. ಅವರ ಜೊತೆ ನಾನು ಮಾತನಾಡಿ, ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಅವರಿಗೆ ವೈಯುಕ್ತಿಕವಾಗಿ ಆದ ನೋವಿನಿಂದಾಗಿ ರಾಜೀನಾಮೆ ನಿರ್ಧಾರ ನೀಡಿರಬಹುದು. ಆದರೆ ಮುಂದಿನ ದಿನಗಳಲ್ಲಿ ಯಾವುದೇ ಶಾಸಕರು ರಾಜೀನಾಮೆ ನೀಡುವುದಿಲ್ಲ, ಅವರಿಗೆಲ್ಲಾ ಅಧಿಕಾರ, ಸಚಿವ ಸ್ಥಾನದ ಆಸೆಯಿರುತ್ತದೆ ಎಂದು ತಿಳಿಸಿದರು.
ಅಧಿಕಾರ, ಸ್ಥಾನಮಾನ ಸಿಗಲಿಲ್ಲ ಎಂದು ಕೆಲವರಲ್ಲಿ ಅಸಮಾಧಾನವಿದೆ. ಹೊಟ್ಟೆ ನೋವು ಬಂದಾಗ ಅದಕ್ಕೆ ಔಷಧಿ ತೆಗೆದುಕೊಳ್ಳಬೇಕು. ಅಧಿಕಾರ ಇಲ್ಲ ಎಂದು ಕೆಲವರಿಗೆ ಹೊಟ್ಟೆ ನೋವು ಬಂದಿರಬಹುದು. ಅವರು ಔಷಧಿ ತೆಗೆದುಕೊಳ್ಳಬೇಕು ಅದನ್ನು ಬಿಟ್ಟು ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದರೆ ಅದೆಲ್ಲಾ ನಡೆಯುವುದಿಲ್ಲ. ಯಾವ ಶಾಸಕರಿಗೂ ಶಾಸಕ ಸ್ಥಾನ ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. 
ಸಚಿವ ಡಿಕೆ ಶಿವಕುಮಾರ್ ನಿವಾಸದಲ್ಲಿ ಸಭೆ ಮುಗಿಸಿ ಪರಮೇಶ್ವರ್ ತರುವಾಯ ಇಬ್ಬರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಒಂದೇ ಕಾರಿನಲ್ಲಿ ತೆರಳಿ ಸರ್ಕಾರ ಉಳಿಸಿಕೊಳ್ಳುವ ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಭೀಮಾನಾಯಕ್ ಸೇರಿ ಹಲವರು ಭಾಗವಹಿಸಿದ್ದರು. 
ಇದೇ ವೇಳೆ ಕೆಲ ಶಾಸಕರು ಶಾಸಕರ ಭವನದಲ್ಲಿ ವಾಸ್ತವ್ಯ ಹೂಡಿರುವ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಸಿದ್ದರಾಮಯ್ಯ ಸೂಚನೆ ಮೇರೆಗೆ ಶಾಸಕರಾದ ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜು ಕರೆದುಕೊಂಡು ಬಂದರು ಎನ್ನಲಾಗಿದೆ. 
ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದಾಗಿ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡಿದ್ದು, ಕಾಂಗ್ರೆಸ್ ಪಕ್ಷದ ಶಾಸಕರನ್ನು ಬೆಂಗಳೂರಿಗೆ ಬರುವಂತೆ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com