ಶಾಸಕರ ರಾಜೀನಾಮೆ: ತುರ್ತು ಸಿಎಲ್ ಪಿ ಸಭೆ ಕರೆದ ಸಿದ್ದರಾಮಯ್ಯ; ರಿವರ್ಸ್ ಆಪರೇಷನ್ ಗೆ ಸಿದ್ಧ ಎಂದ ಗುಂಡೂರಾವ್

ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದಂತೆ ಎಚ್ಚೆತ್ತುಕೊಂಡಿರುವ...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on
ಬೆಂಗಳೂರು: ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಕಾಂಗ್ರೆಸ್ ಮುಖಂಡರು ಇದೀಗ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾರ್ಯತಂತ್ರ ಹೆಣೆಯುವಲ್ಲಿ ಮಗ್ನರಾಗಿದ್ದಾರೆ. 
ಇಬ್ಬರು ಶಾಸಕರ ರಾಜೀನಾಮೆ ನಂತರ ಸರಣಿ ಸಭೆಗಳನ್ನು ನಡೆಸಿದ ಕಾಂಗ್ರೆಸ್ ನಾಯಕರು, ಅತೃಪ್ತ ಶಾಸಕರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಮಧ್ಯೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ತಮ್ಮ ನಿವಾಸದಲ್ಲಿ ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದಾರೆ.
ಆಪರೇಷನ್ ಕಮಲಕ್ಕೆ ಪ್ರತಿ ಆಪರೇಷನ್ ಮಾಡಲು ಹಿಂಜರಿಯಲ್ಲ: ದಿನೇಶ್ ಗುಂಡೂರಾವ್
ಬಿಜೆಪಿಯವರು ಮೈತ್ರಿ ಸರ್ಕಾರ ಅಸ್ಥಿರಗೊಳಿಸಿ, ಗೊಂದಲ ಮೂಡಿಸಲು ಮುಂದಾಗಿದ್ದಾರೆ ಸರ್ಕಾರ ಅಸ್ಥಿರಗೊಳಿಸಲು ಮುಂದಾದರೆ ನಾವೂ ಸಹ ಸೂಕ್ತ ಉತ್ತರ ನೀಡುತ್ತೇವೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ನಡೆಸುವ ಸುಳಿವನ್ನು ನೀಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಯಾವ ಕಾರಣಕ್ಕೆ ರಾಜಿನಾಮೆ ನೀಡಿದ್ದಾರೆ ಎಂಬುದು ಇನ್ನೂ ಅರ್ಥವಾಗುತ್ತಿಲ್ಲ. ಸಿಂಗ್ ಬಳಿ
ಖುದ್ದಾಗಿ ತಾವೇ ಕರೆ ಮಾಡಿ ಮಾತನಾಡುತ್ತೇನೆ. ಅವರು ತಮ್ಮ ಒಳ್ಳೆಯ ಸ್ನೇಹಿತರು, ಜಿಂದಾಲ್ ವಿಚಾರದಲ್ಲಿ ಆನಂದ್ ಸಿಂಗ್ ರಾಜಿನಾಮೆ ನೀಡುವ ಅಗತ್ಯವಿರಲಿಲ್ಲ, ಜಿಂದಾಲ್ ಜಮೀನು ಹಂಚಿಕೆ ಪ್ರಕರಣದ ಮರು ಪರಿಶೀಲನೆಗೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಅದಕ್ಕಾಗಿ ಅವರು ರಾಜಿನಾಮೆ ನೀಡುವ ವಿಚಾರವಲ್ಲ. ಆನಂದ್ ಸಿಂಗ್ ಯಾವ ಕಾರಣಕ್ಕೆ, ಏನು ಒತ್ತಡಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದಾರೆ ಎಂಬುದು ತಿಳಿದಿಲ್ಲ ಎಂದರು.
ಬಿಜೆಪಿ ನಾಯಕರು ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ, ಗೊಂದಲ ಮೂಡಿಸಲು ಮುಂದಾಗಿದ್ದಾರೆ. ಸುಸೂತ್ರವಾಗಿ ನಡೆಯುತ್ತಿರುವ ಸರ್ಕಾರವನ್ನು ಅತಂತ್ರಗೊಳಿಸಿ ರಾಜ್ಯದಲ್ಲಿ ರಾಜಕೀಯ ವಾತಾವರಣದಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಆನಂದ್ ಸಿಂಗ್ ರಾಜೀನಾಮೆ ನೀಡಿದರೂ ಅವರ ಮನವೊಲಿಸಲು ಪ್ರಯತ್ನ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಯಾರೂ ಕೂಡ ರಾಜೀನಾಮೆ ನೀಡುವುದಿಲ್ಲ. ಸರ್ಕಾರ ತನ್ನ ಉಳಿದ ಅವಧಿಯನ್ನು ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರು ಕೆಲ ಶಾಸಕರನ್ನು ಬೆದರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಕೆಯ ಕುತಂತ್ರ ರಾಜಕಾರಣವನ್ನು ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರಕ್ಕೆ ಬಹುಮತವಿದೆ. ರಾಜಕಾರಣದಲ್ಲಿ ಅಂತಹ ಪರಿಸ್ಥಿತಿಗಳು ಎದುರಾದರೆ ಎದುರಿಸುವ ಶಕ್ತಿ ಸಾಮರ್ಥ್ಯ ನಮಗೆ ಇದೆ. ಅವಶ್ಯಕತೆ ಬಿದ್ದರೆ ತಿರುಗೇಟು ನೀಡಲೂ ನಾವು ಸಿದ್ದರಿದ್ದೇವೆ. ಅವರ ಪ್ರಯತ್ನ ಮುಂದುವರೆಸಿದರೆ ತಕ್ಕ ಉತ್ತರವನ್ನು ಹೇಗೆ, ಯಾವಾಗ, ನೀಡಬೇಕೋ ಎಂಬುದು ನಮಗೂ ತಿಳಿದಿದೆ ಎಂದು ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com