ದೇವೇಗೌಡರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಶುಕ್ರವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ

ಮೈತ್ರಿ ಸರ್ಕಾರದ 14 ಶಾಸಕರ ದಿಢೀರ್ ರಾಜೀನಾಮೆಯೊಂದಿಗೆ ಈ ಬಾರಿ ಆಪರೇಷನ್ ಕಮಲ ಬಹುತೇಕ ಯಶಸ್ವಿಯಾಗಿದ್ದು, ಸರ್ಕಾರ ಉಳಿಸಿಕೊಳ್ಳುವ...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
Updated on
ಬೆಂಗಳೂರು: ಮೈತ್ರಿ ಸರ್ಕಾರದ 14 ಶಾಸಕರ ದಿಢೀರ್ ರಾಜೀನಾಮೆಯೊಂದಿಗೆ ಈ ಬಾರಿ ಆಪರೇಷನ್ ಕಮಲ ಬಹುತೇಕ ಯಶಸ್ವಿಯಾಗಿದ್ದು, ಸರ್ಕಾರ ಉಳಿಸಿಕೊಳ್ಳುವ ಮೈತ್ರಿಪಕ್ಷಗಳ ಪ್ರಯತ್ನ ಕ್ಷಣಕ್ಷಣವೂ ಕ್ಷೀಣಿಸುತ್ತಾ ಸಾಗುತ್ತಿದೆ.
ಅತ್ತ ಸಚಿವ ಡಿಕೆ ಶಿವಕುಮಾರ್ ಅವರು ಅತೃಪ್ತ ಶಾಸಕರನ್ನು ಕರೆತರಲು ಮುಂಬೈಗೆ ಹೋಗಿ ಬರಿಗೈಲಿ ವಾಪಸ್ಸಾಗಿದ್ದು, ಇತ್ತ ಒಬ್ಬರಾದ ಮೇಲೆ ಒಬ್ಬ ಶಾಸಕರು ರಾಜೀನಾಮೆ ಕೊಡಲು ಮುಂದಾಗುತ್ತಿದ್ಧಾರೆ.  ಇದರಿಂದ ಸ್ಪೀಕರ್ ರಮೇಶ್ ಕುಮಾರ್ ಅವರಿಂದಲೂ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ದಿಕ್ಕುತೋಚದಂತಾದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಬೆಂಗಾವಲು ವಾಹನಗಳನ್ನು ಬಿಟ್ಟು, ತಮ್ಮ ತಂದೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ತಾವು ಅಮೆರಿಕ ಪ್ರವಾಸದಲ್ಲಿದ್ದಾಗ 13 ಶಾಸಕರು ಒಟ್ಟಿಗೆ ರಾಜೀನಾಮೆ ಕೊಟ್ಟಾಗಲೇ ಕುಮಾರಸ್ವಾಮಿ ಅವರು ರಾಜೀನಾಮೆ ಕೊಡಲು ಮುಂದಾಗಿದ್ದರಂತೆ. ಆದರೆ, ಕಾಂಗ್ರೆಸ್ ಪಕ್ಷದವರು ಇದನ್ನು ತಡೆದು, ತಾವು ಶಾಸಕರ ಮನವೊಲಿಸುತ್ತೇವೆಂದು ಭರವಸೆ ನೀಡಿ ಸುಮ್ಮನಾಗಿಸಿದ್ದರಂತೆ. ಈಗ ಇನ್ನಷ್ಟು ಶಾಸಕರು ರಾಜೀನಾಮೆ ನೀಡುತ್ತಿರುವುದರಿಂದ ಸರ್ಕಾರ ಉಳಿಯುವುದು ಅಸಾಧ್ಯವೆಂಬ ಸ್ಥಿತಿ ತಲುಪಿದೆ. ಹೀಗಾಗಿ ಕುಮಾರಸ್ವಾಮಿ ರಾಜೀನಾಮೆ ನೀಡುವ ಗಟ್ಟಿ ನಿರ್ಧಾರಕ್ಕೆ ಬಂಧಿದ್ದಾರೆ ಎನ್ನಲಾಗಿದೆ
ಜುಲೈ 12ರಂದು ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದ ಮೊದಲ ದಿನವೇ ಸಿಎಂ ವಿದಾಯ ಭಾಷಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಸಿಎಂ ಕುಮಾರಸ್ವಾಮಿ ಅವರು ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಸಚಿವ ಸಂಪುಟ ಸಭೆ ಕರೆದಿದ್ದು, ರಾಜೀನಾಮೆಗೆ ಸಂಬಂಧಿಸಿದಂತೆ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com