ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ನಡೆಯುತ್ತಿರುವ ಬೃಹನ್ನಾಟಕ ಗುರುವಾರದವರೆಗೆ ಮುಂದುವರೆಯಲಿದ್ದು, ಜು.18 ರಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ.
ಜು.15 ರಂದು ಸ್ಪೀಕರ್ ನೇತೃತ್ವದಲ್ಲಿ ನಡೆದ ಕಲಾಪ ಸದನ ಸಮಿತಿ ಸಭೆಯಲ್ಲಿ ಗುರುವಾರದಂದು ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ವಿಪಕ್ಷ ನಾಯಕ ಯಡಿಯೂರಪ್ಪ ಸಭೆಯಲ್ಲಿ ಭಾಗವಹಿಸಿದ್ದರು.
ಗುರುವಾರ ಸಿಎಂ ವಿಶ್ವಾಸಮತಯಾಚನೆಗೆ ಒಪ್ಪಿಗೆ ಸೂಚಿಸಿರುವ ಬಿಜೆಪಿ ನಾಯಕರು ಜು.18 ವರೆಗೆ ಯಾವುದೇ ಕಲಾಪವನ್ನೂ ನಡೆಸದಂತೆ ಸ್ಪೀಕರ್ ಗೆ ಮನವಿ ಮಾಡಿದ್ದಾರೆ.
"ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟು ನಾವು ಗುರುವಾರದಂದು ವಿಶ್ವಾಸಮತಯಾಚನೆಗೆ ಒಪ್ಪಿಗೆ ಸೂಚಿಸಿದ್ದೇವೆ, ಆದರೆ ವಿಶ್ವಾಸಮತಯಾಚನೆ ಬಳಿಕವಷ್ಟೇ ಕಲಾಪ ನಡೆಯಬೇಕೆಂದು ಮನವಿ ಮಾಡಿದ್ದೇವೆ" ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಹೇಳಿದ್ದಾರೆ.