ರಾಜ್ಯ ರಾಜಕೀಯ ಹಗ್ಗಜಗ್ಗಾಟ ನಡುವೆ ವಿಧಾನ ಪರಿಷತ್ ಕಲಾಪ ಗುರುವಾರಕ್ಕೆ ಮುಂದೂಡಿಕೆ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರದ ವಿಧಾನ ಪರಿಷತ್‌ನಲ್ಲಿ ಮುಂದುವರಿದ ಪರಿಣಾಮ ಸದನದ ಕಲಾಪವನ್ನು ಗುರುವಾರಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.
ರ್ನಾಟಕ ವಿಧಾನ ಪರಿಷತ್,-ಸಂಗ್ರಹ ಚಿತ್ರ
ರ್ನಾಟಕ ವಿಧಾನ ಪರಿಷತ್,-ಸಂಗ್ರಹ ಚಿತ್ರ
Updated on
ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರದ ವಿಧಾನ ಪರಿಷತ್‌ನಲ್ಲಿ ಮುಂದುವರಿದ ಪರಿಣಾಮ ಸದನದ ಕಲಾಪವನ್ನು ಗುರುವಾರಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.
ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಪೀಠದ ಮುಂಭಾಗಕ್ಕೆ ಬಂದ ಪ್ರತಿಪಕ್ಷ ಬಿಜೆಪಿ ಸದಸ್ಯರು ಬಹುಮತವಿಲ್ಲದ ಸರ್ಕಾರವನ್ನು ವಿಸರ್ಜಿಸಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಟ್ಟುಹಿಡಿದರು.
ಸರ್ಕಾರ ಹಾಗೂ ಮೈತ್ರಿ ಪಕ್ಷಗಳ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ ಧಿಕ್ಕಾರ ಕೂಗಿದರು. ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಡುವಂತೆ ಉಪಸಭಾಪತಿ ಧರ್ಮೇಗೌಡ ಸೂಚಿಸಿದರಾದರೂ ಬಿಜೆಪಿ ಸದಸ್ಯರು ಇದಕ್ಕೆ ಕಿವಿಗೊಡಲಿಲ್ಲ.
ಬಿಜೆಪಿಯ ಧರಣಿಗೆ ಸಚಿವರಾದ ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಆಡಳಿತ ಪಕ್ಷದ ನಾಯಕಿ ಡಾ. ಜಯಮಾಲಾ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡವುಎ ವಾಗ್ ಯುದ್ಧ ಆರಂಭವಾದ ಪರಿಣಾಮ ಸದನದಲ್ಲಿ ಗದ್ದಲ ಏರ್ಪಟ್ಟಿತ್ತು.
ಈ ಮಧ್ಯೆ ಉಪಸಭಾಪತಿ ಧರ್ಮೇಗೌಡ ಅವರು, ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಮಾಡಿಕೊಟ್ಟು, ಬಿಜೆಪಿ ಸದಸ್ಯರು ತಮ್ಮ ಆಸನಕ್ಕೆ ಹಿಂದಿರುಗುವಂತೆ ಸೂಚಿಸಿದರು.
ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಬಹುಮತ ಕಳೆದುಕೊಂಡ ಸರ್ಕಾರ‌ಒಂದು ದಿನ ಮುಂದುವರಿಯಬಾರದು. ಡಿಕೆಶಿ ಸೇರಿದಂತೆ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಸಿಎಂ ಕೂಡಲೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.ಪ್ರತಿಪಕ್ಷ ಬಿಜೆಪಿ ಭಿತ್ತಿಪತ್ರಕ್ಕೆ ಪ್ರತಿಯಾಗಿ ಆಪರೇಷನ್ ಕಮಲದ ಬರಹವುಳ್ಳ ಬಿತ್ತಿಪತ್ರವನ್ನು ಮೈತ್ರಿ ಸದಸ್ಯರು ಎತ್ತಿ ತೋರಿಸಿದರು‌. ಈ ವೇಳೆ ಸದನದಲ್ಲಿ ಗದ್ದಲ ತಾರಕಕ್ಕೇರಿದ ಹಿನ್ನೆಲೆ ಕಲಾಪವನ್ನು ಹದಿನೈದು ನಿಮಿಷಕ್ಕೆ ಮುಂದೂಡಲಾಯಿತು.
ಮತ್ತೆ ಸದನ ಸಮಾವೇಶಗೊಂಡಾಗ ಉಪಸಭಾಪತಿ ಪೀಠಕ್ಕೆ ಆಸೀನರಾಗುವ ಮೊದಲೇ ಬಿಜೆಪಿ ಗಲಾಟೆಗೆ ಮುಂದಾಯಿತು. ಸಭಾಪತಿ ಪೀಠದ ಮುಂಭಾಗಕ್ಕೆ ಬಂದ ಬಿಜೆಪಿ ಸದಸ್ಯರು ತಮ್ಮ ಪಟ್ಟು ಸಡಿಲಿಸದೇ ಸರ್ಕಾರದ ವಿರುದ್ಧ ಆಕ್ರೋಶ ಕೂಗಿದರು. ಅರುಣ್ ಶಹಾಪುರ ಮತ್ತು ಇತರ ಸದಸ್ಯರು 'ಮುಖ್ಯಮಂತ್ರಿಗಳೇ ರಾಜೀನಾಮೆ ಕೊಡಿ ರಾಜೀನಾಮೆಕೊಡಿ 'ಎಂದು ಧಿಕ್ಕಾರ ಕೂಗಿದ ಬಿಜೆಪಿ ಸದಸ್ಯರು, ಸರ್ಕಾರಕ್ಕೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಗಲಾಟೆ ಮಧ್ಯೆಯೇ ಉಪಸಭಾಪತಿ, ಆಯನೂರು ಮಂಜುನಾಥ್ ಮತ್ತು ಕೆ.ಸಿ.ಕೊಂಡಯ್ಯ ಅವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಹಕ್ಕುಬಾಧ್ಯತಾ ಸಮಿತಿಯ 95ನೇ ಮತ್ತು 47 ನೇ ವರದಿ ಒಪ್ಪಿಸಲು ಹೇಳಿದರು.
ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, . ಅಲ್ಪಮತಕ್ಕೆ ಕುಸಿದ ಸರ್ಕಾರಕ್ಕೆ ನಾಚಿಕೆಯಿಲ್ಲ. ಸರ್ಕಾರ ನಾಟಕವಾಡುತ್ತಿದೆ. ಈ ನಾಟಕಕ್ಕೆ ಉಪಸಭಾಪತಿಗಳು ಸಾಕ್ಷಿಯಾಗಬಾರದು ಎಂದರು.
ಬಿಜೆಪಿ ಸದಸ್ಯರ ಧಿಕ್ಕಾರದ ನಡುವೆಯೇ ಸಭಾನಾಯಕಿ ಜಯಾಮಾಲಾ, ಚುಕ್ಕೆ ಮತ್ತು ಚುಕ್ಕೆರಹಿತ ಪ್ರಶ್ನೆಗಳನ್ನು ಸದನದಲ್ಲಿ ಮಂಡಿಸುತ್ತಿದ್ದಂತೆಯೇ, ಉಪಸಭಾಪತಿ ಧರ್ಮೇಗೌಡ ಅವರು ಸದನವನ್ನು ಗುರುವಾರ ಬೆಳಿಗ್ಗೆ 11.30 ಕ್ಕೆ ಮುಂದೂಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com