ನಾನು ಉಪಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ: ದೇವೇಗೌಡ ಭೇಟಿ ಬಳಿಕ ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಬೆಂಗಳೂರಿನಲ್ಲಿಂದು ಜೆಡಿಎಸ್ ವರಿಷ್ಠ ಎಚ್‌ ಡಿ ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ
Updated on
ಬೆಂಗಳೂರು: ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಬೆಂಗಳೂರಿನಲ್ಲಿಂದು ಜೆಡಿಎಸ್ ವರಿಷ್ಠ ಎಚ್‌ ಡಿ ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಮುಂಬೈಯಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರನ್ನು ರಾಮಲಿಂಗಾ ರೆಡ್ಡಿ ಅವರ ಮೂಲಕ ಸಂಪರ್ಕಿಸುವ ಪ್ರಯತ್ನವನ್ನು ದೇವೇಗೌಡರು ಮಾಡಿದರು, ಆದರೆ ಅತೃಪ್ತ ಶಾಸಕರು ರೆಡ್ಡಿ ಅವರ ಮೊಬೈಲ್ ಕರೆ ಸ್ವೀಕರಿಸದ ಕಾರಣ ಈ ಪ್ರಯತ್ನವೂ ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ.
ದೇವೇಗೌಡರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ನನಗೆ ಉಪ ಮುಖ್ಯಮಂತ್ರಿ ಹುದ್ದೆ ಬೇಡ. ದೇವೇಗೌಡರ ಜೊತೆ ನಡೆಸಿದ ಮಾತುಕತೆಯಲ್ಲಿ ಡಿಸಿಎಂ ಹುದ್ದೆಯ ಬಗ್ಗೆ ಚರ್ಚೆ ನಡೆದಿಲ್ಲ. ಇದೊಂದು ಸೌಜನ್ಯದ ಭೇಟಿ ಅಷ್ಟೇ. ರಾಜಕೀಯದಲ್ಲಿರುವಾಗ ದೇವೇಗೌಡರನ್ನು ಆಗಾಗ ಭೇಟಿಯಾಗುತ್ತಿರುತ್ತೇನೆ. ಹಾಗೆಯೇ ಇಂದು ಕೂಡ ಭೇಟಿಯಾಗಿದ್ದೇನೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅತೃಪ್ತ ಶಾಸಕರು ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಸೋಮಶೇಖರ್ ಹೇಳಿದ ಎಲ್ಲಾ ಮಾತು ಸತ್ಯ. ನಾವೆಲ್ಲಾ ಒಟ್ಟಾಗಿ ರಾಜೀನಾಮೆ ಕೊಟ್ಟಿದ್ದೆವು. ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯಬಾರದು ಎಂದು ತೀರ್ಮಾನವಾಗಿತ್ತು. ಆದರೆ ನಮ್ಮ ಪಕ್ಷದ ಹಿರಿಯ ನಾಯಕರ ಒತ್ತಡ, ಜನರ ಒತ್ತಡದಿಂದಾಗಿ ರಾಜೀನಾಮೆ ವಾಪಸ್‌ ಪಡೆದಿದ್ದೇನೆ. ಭಾನುವಾರ ಕೂಡ ಶಾಸಕ ಸೋಮಶೇಖರ್ ಅವರ ಜೊತೆ ಮಾತನಾಡಿದ್ದೆ. ಆನಂತರ ಅವರು ತಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದರು.
ಎಂಟಿಬಿ ನಾಗರಾಜ್ ಹೇಳಿಕೆಗೂ ನನಗೂ ಸಂಬಂಧವಿಲ್ಲ. ನಾನು ನಾಗರಾಜ್ ಅವರನ್ನು ಭೇಟಿಯಾಗಿಲ್ಲ. ಎಚ್. ವಿಶ್ವನಾಥ್ ಅವರನ್ನು ಒಂದು ಬಾರಿ ಭೇಟಿಯಾಗಿದ್ದೆ ಎಂದು ಸ್ಪಷ್ಟಪಡಿಸಿದ ರಾಮಲಿಂಗಾ ರೆಡ್ಡಿ, ನನಗೆ ಡಿಸಿಎಂ ಹುದ್ದೆ ಬೇಕಾಗಿಲ್ಲ. ಕಾಂಗ್ರೆಸ್, ಬಿಜೆಪಿಯಲ್ಲಿ ಅನೇಕ ಜನ ಡಿಸಿಎಂ ಆಗಬೇಕು ಎಂಬ ಆಸೆ ಇಟ್ಟುಕೊಂಡವರಿದ್ದಾರೆ. ಆದರೆ ನನಗೆ ಈ ರೀತಿಯ ಯಾವುದೇ ಆಸೆ ಇಲ್ಲ. ಡಿಸಿಎಂ ಹುದ್ದೆ ಕೊಟ್ಟರೂ ನನಗೆ ಬೇಡ ಎಂದು ಹೇಳಿದರು.
ರಾಮಲಿಂಗಾ ರೆಡ್ಡಿ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಬಳಿಕ ಪಕ್ಷದ ಹಿರಿಯ ನಾಯಕರ ಮನವೊಲಿಕೆಯ ನಂತರ ರಾಜೀನಾಮೆ ವಾಪಸ್ ಪಡೆದು, ಅಧಿವೇಶನದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com