ಈಗ ಎಲ್ಲಾ ಮುಗಿದಿದೆ, ಎಲ್ಲರೂ ತೃಪ್ತರಾಗಿದ್ದಾರೆ, ಮುಂದಿನ ಕ್ರಮವಷ್ಟೆ ಉಳಿದಿದೆ: ಸ್ಪೀಕರ್ ರಮೇಶ್ ಕುಮಾರ್

ನೂತನ ಸರ್ಕಾರ ರಚನೆಯಲ್ಲಿ ನನ್ನ ಪಾತ್ರವೇನು ಇಲ್ಲ, ರಾಜ್ಯಪಾಲರು ಸರ್ಕಾರ ರಚನೆ ಮಾಡುವಂತೆ ಆಹ್ವಾನಿಸುತ್ತಾರೆ...
ಸದನದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದ ಸಾಂದರ್ಭಿಕ ಚಿತ್ರ
ಸದನದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದ ಸಾಂದರ್ಭಿಕ ಚಿತ್ರ
ಬೆಂಗಳೂರು: ನೂತನ ಸರ್ಕಾರ ರಚನೆಯಲ್ಲಿ ನನ್ನ ಪಾತ್ರವೇನು ಇಲ್ಲ, ರಾಜ್ಯಪಾಲರು ಸರ್ಕಾರ ರಚನೆ ಮಾಡುವಂತೆ ಆಹ್ವಾನಿಸುತ್ತಾರೆ. ಅವರ ಆದೇಶದ ಪ್ರಕಾರ ನಡೆಯುತ್ತದೆ ಎಂದು ಬುಧವಾರ ಸ್ಪೀಕರ್ ರಮೇಶ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 
ನಿನ್ನೆ ವಿಧಾನಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಗಳ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಿದ ನಂತರ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅತೃಪ್ತ ಶಾಸಕರ ಅನರ್ಹತೆ ಬಗ್ಗೆ ಕಾನೂನು ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇನೆ. ಒಬ್ಬರು ಶಾಸಕರು ಇಂದು ಸಮಯ ನೀಡಿದ್ದಾರೆ, ಇಂದು ನನ್ನ ಕಚೇರಿಗೆ ಹೋಗುತ್ತಿದ್ದೇನೆ. ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ನೋಡಿಕೊಂಡು ಸಂವಿಧಾನದ ಕಾನೂನು ಪ್ರಕಾರವೇ ತೀರ್ಮಾನ ತೆಗೆದುಕೊಳ್ಳುತ್ತೇನೆಯೇ ಹೊರತು ಕಾನೂನಿಗೆ ವಿರುದ್ಧವಾಗಿ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿನ್ನೆ ನನ್ನ ಕಚೇರಿಗೆ ಅತೃಪ್ತ ಶಾಸಕರ ಪರ ವಕೀಲರು ಬಂದು ಅವರವರ ಕಕ್ಷಿದಾರರ ಪರವಾಗಿ ಹೇಳಬೇಕಾದ್ದನ್ನು ಹೇಳಿದ್ದಾರೆ, ಅವೆಲ್ಲವನ್ನೂ ನಾನು ಕೇಳಿದ್ದೇನೆ, ಅವೆಲ್ಲವನ್ನೂ ಪರಿಶೀಲಿಸಿ ಕಾನೂನು ಏನು ಹೇಳುತ್ತದೆ, ಜನ ಏನು ಬಯಸುತ್ತಾರೆ, ಈ ಶಾಸನವನ್ನು ದೇಶದಲ್ಲಿ ಯಾಕೆ ಮಾಡಿದ್ದಾರೆ ಎಂದು ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ಈಗ ಎಲ್ಲಾ ಮುಗಿದಿದೆ, ಅತೃಪ್ತರು ತೃಪ್ತಿಯಾಗಿದ್ದಾರೆ, ನಾನು ತೃಪ್ತಿಯಾಗಿದ್ದೇನೆ, ನೀವು ತೃಪ್ತಿಯಾಗಿದ್ದೀರಿ, ಇನ್ನು ಮುಂದಿನ ಕ್ರಮವಷ್ಟೆ ಉಳಿದಿದೆ ಎಂದರು.
ನಾನು ಯಾವಾಗಲೂ ಜನರ ನಿರೀಕ್ಷೆಗೆ ಸ್ಪಂದಿಸುವವನು. ಇಂತಹ ಕಾನೂನು ದೇಶದಲ್ಲಿ ಏಕೆ ಬೇಕಾಯಿತು, ಕಾನೂನು ಜಾರಿಗೆ ಬಂದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯೇ ಇಲ್ಲವೇ ಎಂದು ನೋಡಿಕೊಂಡು, ನಾವು ಹೇಗೆ ನಡೆದುಕೊಂಡರೆ ಜನ ಗೌರವಿಸುತ್ತಾರೆ, ಪ್ರೀತಿಸುತ್ತಾರೆ ಎಂದು ನೋಡಿಕೊಂಡು ಅದರ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ ಎಂದರು.
ಸ್ಪೀಕರ್ ಸ್ಥಾನ ನನಗೆ ಯಾವಾಗಲೂ ತೃಪ್ತಿ ಕೊಡುತ್ತದೆ, ನಾನು ಸರ್ಕಾರದ ಕಡೆಗೂ ನೋಡುವುದಿಲ್ಲ, ಪ್ರತಿಪಕ್ಷದ ಕಡೆಗೂ ನೋಡುವುದಿಲ್ಲ, ಜನರ ಹಿತ ನೋಡುತ್ತೇನೆ, ಕಾನೂನು ಬಿಟ್ಟು ಹೋಗುವ ಹಾಗಿಲ್ಲ, ಸದನದಲ್ಲಿ ಸದಸ್ಯರಿಗೆ ಬುದ್ದಿವಾದ ಹೇಳುತ್ತೇನೆ, ಒಂದೊಂದು ಸಲ ಬೈಯುತ್ತೇನೆ, ಒಂದೊಂದು ಸಲ ಶಹಬ್ಬಾಸ್ ಗಿರಿ ಕೊಡುತ್ತೇನೆ, ಜನಪರ ಕೆಲಸ ಮಾಡಿ ಎಂದು ಹೇಳುತ್ತೇನೆ, ಅಷ್ಟೆ ನನಗೇನು ವ್ಯತ್ಯಾಸವಿಲ್ಲ, ಒಂದೇ ರೀತಿ ಇರುತ್ತೇನೆ ನಾನು ಎಂದು ಸ್ಪೀಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com