ಬಿಎಸ್ ವೈ ಪೂರಕ ಬಜೆಟ್‍ಗೆ ಸಿದ್ದರಾಮಯ್ಯ ವಿರೋಧ

ವಿಧಾನಸಭೆಯಲ್ಲಿಂದು ಧನವಿನಿಯೋಗ ಮಸೂದೆ ಜೊತೆಗೆ ಪೂರಕ ಅಂದಾಜು ಬಜೆಟ್ ಮಂಡನೆಗೆ ಬಿಜೆಪಿ ಮುಂದಾಗಿದ್ದನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ....
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ವಿಧಾನಸಭೆಯಲ್ಲಿಂದು ಧನವಿನಿಯೋಗ ಮಸೂದೆ ಜೊತೆಗೆ ಪೂರಕ ಅಂದಾಜು ಬಜೆಟ್ ಮಂಡನೆಗೆ ಬಿಜೆಪಿ ಮುಂದಾಗಿದ್ದನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಧನವಿನಿಯೋಗ ಮಸೂದೆ ಮಂಡನೆ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೂರು ತಿಂಗಳ ಲೇಖಾನುದಾನ ಮಂಡಿಸುವುದು ಬೇಡ. 8 ತಿಂಗಳ ಪೂರ್ಣ ಬಜೆಟ್ ಗೆ ಅನುಮೋದನೆ ಪಡೆದುಕೊಳ್ಳಿ. ಬಜೆಟ್ ನಲ್ಲಿ ಒಂದಕ್ಷರವೂ ಬದಲಾವಣೆ ಮಾಡಿಲ್ಲ ಎಂದು ಹೇಳಿಕೊಂಡು ಲೇಖಾನುದಾನ ಮಂಡಿಸುವುದು ಸರಿಯಲ್ಲ. ಬೇಡಿಕೆಗಳ ಮೇಲೆ ಚರ್ಚೆ ಆಗದೇ ಲೇಖಾನುದಾನ ಮಂಡಿಸಲಾಗಿದೆ. ಈಗ ಹೊಸದಾಗಿ ಪೂರಕ ಅಂದಾಜು ಬಜೆಟ್ ಮಂಡಿಸುವುದು ಬೇಡ ಎಂದರು.
ಪೂರಕ ಬಜೆಟ್ ಏಕಾಏಕಿ ಮಂಡಿಸಿದ್ದಾರೆ. ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳುತ್ತಿದ್ದ ಯಡಿಯೂರಪ್ಪ, ಪದಗ್ರಹಣಕ್ಕೂ ಮುನ್ನವೇ ಮೈತ್ರಿ ಸರ್ಕಾರದ ಕೆಲಸ ಕಾರ್ಯಗಳನ್ನು, ಯೋಜನೆಗಳನ್ನು ವರ್ಗಾವಣೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
881 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಬಿಡುಗಡೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಪೂರಕ ಬಜೆಟ್ ಮಂಡಿಸುವುದು ಬೇಡ ಎಂದು ಆಗ್ರಹಿಸಿದರು.
ಆಗ ಬಿಜೆಪಿಯ ಮಾಧುಸ್ವಾಮಿ ಮಾತನಾಡಿ, ಇದು ಮೈತ್ರಿ ಸರ್ಕಾರದಲ್ಲಿಯೇ ಮಂಡಿಸಿದ್ದ ಪೂರಕ ಬಜೆಟ್. ರಾಜ್ಯದಲ್ಲಿ ಬರಗಾಲವಿದೆ. ತುರ್ತು ಕಾಮಗಾರಿಗಳಿಗೆ ಅನುದಾನ ಬೇಕಿದೆ. ಕೇಂದ್ರದಿಂದಲೂ ಅನುದಾನ ಬಂದಿದೆ. ಹೀಗಾಗಿ 3 ತಿಂಗಳ ಲೇಖಾನುದಾನಕ್ಕೆ ಅನುಮೋದನೆ ನೀಡಬೇಕು ಎಂದರು.
ಇದಕ್ಕೆ ಜೆಡಿಎಸ್‍ ಸದಸ್ಯ ಜಿ.ಟಿ.ದೇವೇಗೌಡ ಧ್ವನಿಗೂಡಿಸಿ, ನಾವೇ ಮೈತ್ರಿ ಸರ್ಕಾರದಲ್ಲಿ ಪೂರಕ ಬಜೆಟ್ ಮಾಡಿದ್ದೇವೆ. ಅನುಮೋದನೆ ಮಾಡಿಕೊಡೋಣ ಬಿಡಿ ಎಂದರು. ಬಳಿಕ ಸಿದ್ದರಾಮಯ್ಯ ಒಪ್ಪಿ 3 ತಿಂಗಳ ಪೂರಕ ಲೇಖಾನುದಾನಕ್ಕೆ ಒಪ್ಪಿಗೆ ಸೂಚಿಸಿದರು. 
ವಿಶ‍್ವಾಸಮತ ಚರ್ಚೆ ಮೇಲೆ ಮಾತನಾಡಿದ ಸಿದ್ದರಾಮಯ್ಯ, ಜನಾದೇಶವಿಲ್ಲದೇ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಪೂರ್ಣ ಅವಧಿ ಆಡಳಿತ ನಡೆಸಲು ಸಾಧ‍್ಯವೇ ಇಲ್ಲ. ಅಸಂವಿಧಾನಿಕ ಮತ್ತು ನೈತಿಕತೆಯಿಲ್ಲದ ಸರ್ಕಾರ ಇದಾಗಿರುವುದರಿಂದ ಯಡಿಯೂರಪ್ಪ ಅವರ ವಿಶ್ವಾಸಮತವನ್ನು ವಿರೋಧಿಸುವುದಾಗಿ ಸದನಕ್ಕೆ ತಿಳಿಸಿದರು.
ಮೈತ್ರಿ ಸರ್ಕಾರದ ವಿಶ್ವಾಸಮತದ ಮೇಲೆ ನಡೆದ ನಾಲ್ಕು ದಿನಗಳ ಚರ್ಚೆಯಲ್ಲಿ ಭಾಗವಹಿಸಿದ್ದೇನೆ. ಯಡಿಯೂರಪ್ಪ ಯಾವ ಮಾರ್ಗದಲ್ಲಿ ಅಧಿಕಾರ ಹಿಡಿದಿದ್ದಾರೆ ಎಂದು ಎಲ್ಲರಿಗೂ ಸ್ಪಷ್ಟವಾಗಿರುವುದರಿಂದ ಈ ಬಗ್ಗೆ ಮತ್ತೆ ತಾವು ಸದನದಲ್ಲಿ ವಿವರಿಸುವ ಅವಶ್ಯಕತೆಯಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಕುಟುಕಿದರು.
ದ್ವೇಷದ ರಾಜಕಾರಣ ಮಾಡದೇ ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುವುದಾಗಿ ಯಡಿಯೂರಪ್ಪ ಹೇಳಿರುವುದನ್ನು ಸ್ವಾಗತಿಸುತ್ತೇವೆ. ಮೈತ್ರಿ ಸರ್ಕಾರ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಯತ್ನಿಸಲಾಗಿದೆ. ರೈತರಿಗೆ ಸಾಲ ಮನ್ನಾ, ಬಡವರಿಗೆ ಅನುಕೂಲ ಆಗುವಂತಹ ಜನಮೆಚ್ಚುಗೆಯ ಆಡಳಿತ ನೀಡಿದ್ದೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com