ಸರ್ಕಾರ ಪತನವಾಗಿ ಯಡಿಯೂರಪ್ಪ ತಾವೇ ಸಿಎಂ ಆಗಬೇಕೆಂದು ಆಸೆಪಡುವುದು ತಪ್ಪಲ್ಲ: ಡಿಕೆ ಶಿವಕುಮಾರ್

ರಾಜ್ಯದ ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಅಧಿಕಾರಕ್ಕೆ ಬಂದು ತಾವು ಮುಖ್ಯಮಂತ್ರಿ ಆಗಬೇಕೆಂಬ ಯಡಿಯೂರಪ್ಪ ಅವರ ಆಸೆ ತಪ್ಪೇನೂ ಅಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ
ಸರ್ಕಾರ ಪತನವಾಗಿ ಯಡಿಯೂರಪ್ಪ ತಾವೇ ಸಿಎಂ ಆಗಬೇಕೆಂದು ಆಸೆಪಡುವುದು ತಪ್ಪಲ್ಲ: ಡಿಕೆ ಶಿವಕುಮಾರ್
ಸರ್ಕಾರ ಪತನವಾಗಿ ಯಡಿಯೂರಪ್ಪ ತಾವೇ ಸಿಎಂ ಆಗಬೇಕೆಂದು ಆಸೆಪಡುವುದು ತಪ್ಪಲ್ಲ: ಡಿಕೆ ಶಿವಕುಮಾರ್
Updated on
ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಅಧಿಕಾರಕ್ಕೆ ಬಂದು ತಾವು ಮುಖ್ಯಮಂತ್ರಿ ಆಗಬೇಕೆಂಬ ಯಡಿಯೂರಪ್ಪ ಅವರ ಆಸೆ ತಪ್ಪೇನೂ ಅಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ನಮ್ಮ ಮಿತ್ರರು. ಈ ಮೊದಲು ‘ಮಿತ್ರ ಪಕ್ಷದ ಶಾಸಕರು ಒಬ್ಬರಿಗೊಬ್ಬರು ಪರಸ್ಪರ ಹೊಡೆದಾಡಿಕೊಂಡು ಸರ್ಕಾರ ಬೀಳುತ್ತದೆ’ ಎಂದು ಹೇಳಿಕೆ ನೀಡಿದ್ದರು.ಸರ್ಕಾರ ಬೀಳುತ್ತದೆ ಎಂದು ಹೇಳುವ ಮೂಲಕ ಯಡಿಯೂರಪ್ಪನವರಿಗೆ ಸಂತೋಷ ಸಿಗುವುದಾದರೆ ಸಿಗಲಿ, ನಮಗೇನೂ ಬೇಸರವಿಲ್ಲ. ಕಳೆದೊಂದು ವರ್ಷದಿಂದಲೂ ಯಡಿಯೂರಪ್ಪನವರು ಇದೇ ರೀತಿ ಮೈತ್ರಿ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ನಾವು ಯಡಿಯೂರಪ್ಪನವರ ಭವಿಷ್ಯವನ್ನೂ ನೋಡಿದ್ದೇವೆ, ಬಿಜೆಪಿ ನಾಯಕರ ಭವಿಷ್ಯವನ್ನೂ ನೋಡಿದ್ದೇವೆ ಎಂದು ಬಿಜೆಪಿಗೆ ಸಚಿವ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಪಕ್ಷೇತರರಿಗೆ ಮೈತ್ರಿ ಸರ್ಕಾರದಲ್ಲಿ ಹೆಚ್ಚಿನ ಆದ್ಯತೆ ನೀಡಿರುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೈತ್ರಿ ಸರ್ಕಾರ ಸುಗಮವಾಗಿ ನಡೆಯಬೇಕಾದರೆ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೋ ಅವರನ್ನು ಸೇರಿಸಿಕೊಳ್ಳಲಾಗುತ್ತದೆ. ಪ್ರಾಮಾಣಿಕವಾಗಿರುವ ಹಿರಿಯ ನಾಯಕರಿಗೂ ಮುಂದೆ ಖಂಡಿತ ಅವಕಾಶವಿದೆ. ಪಕ್ಷ ಉಳಿಯಬೇಕು ಎನ್ನುವ ಉದ್ದೇಶದಿಂದ ನಾವು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧರಿದ್ದೇವೆ. ಪಕ್ಷ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದರು.
ಸರ್ಕಾರ, ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡಲು ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಸದಾನಂದಗೌಡ ಅವರೇ ಕಾರಣ. ಅವರೇ ಅದಕ್ಕೆ ಅಡಿಪಾಯ ಹಾಕಿ, ಜಮೀನು ನೀಡಲು ತೀರ್ಮಾನ ಮಾಡಿದ್ದು. ಅವರು ಮಾಡಿದ್ದನ್ನು ಇಂದಿನ ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಹೋಗಿದೆ. ಈಗ ಅದು ಒಂದು ಹಂತಕ್ಕೆ ಬಂದು ನಿಂತಿದೆ. ಬೇಕಿದ್ದರೆ ದಾಖಲೆಗಳನ್ನು ತೆಗೆಸಿ ನೋಡಲಿ ಎಂದು ಸ್ಪಷ್ಟೀಕರಣ ನೀಡಿದರು.
‘ನಾವು ಕೈಗಾರಿಕೆಗಳನ್ನು ಬೆಳೆಸದಿದ್ದರೆ ಸರ್ಕಾರ ಎಲ್ಲ ಜನರಿಗೂ ಉದ್ಯೋಗ ನೀಡಲು ಸಾಧ್ಯವಾಗುತ್ತದೆಯೇ ? ಪ್ರಧಾನಮಂತ್ರಿಗಳು ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ಕೊಟ್ಟದ್ದರೆ. ಆದರೆ, ಅವೆಲ್ಲ ಸರ್ಕಾರಿ ಉದ್ಯೋಗಗಳಲ್ಲ. ಜಿಂದಾಲ್ ಅವರು ಇಲ್ಲಿಯೇ ಓದಿದ್ದು, ಅತ್ಯುತ್ತಮ ಉದ್ಯಮಿ. ಯಾವುದೇ ಉದ್ಯಮಿ ಕೂಡ ಲಾಭವಿಲ್ಲದೇ ವ್ಯಾಪಾರ ಮಾಡುವುದಿಲ್ಲ. ಅವರಿಗೂ ಲಾಭವಾಗುತ್ತದೆ. ಹಾಗಂತ ಎಲ್ಲ ವಿಚಾರದಲ್ಲೂ ನಾವು ತಪ್ಪು ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲ ಎಂದರು.
‘ಜಮೀನು ನೀಡುವ ವಿಚಾರವಾಗಿ ಮುಖ್ಯಮಂತ್ರಿಗಳು ಮರುಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಬೇಕಿದ್ದರೆ ಯಡಿಯೂರಪ್ಪನವರೂ ಪರಿಶೀಲನೆ ಮಾಡಲಿ. ಮಾಜಿ ಮುಖ್ಯಮಂತ್ರಿಯಾಗಿ ಅವರ ನಿಲುವೇನು ? ಕೈಗಾರಿಕೆಗಳನ್ನು ರಾಜ್ಯದಿಂದ ಹೊರಹಾಕಲು ಬಯಸುತ್ತಾರೆಯೇ? ಎಲ್ಲದಕ್ಕೂ ಈ ರೀತಿ ತಗಾದೆ ಎತ್ತಿದರೆ ಯಾರು ಬಂದು ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುತ್ತಾರೆ? ಕೈಗಾರಿಕೆಗಳಿಗೆ ಸರ್ಕಾರ ಬೆಂಬಲ ನೀಡಲಿದೆ. ಯಾರು ರಾಜ್ಯದಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೋ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಶಿವಕುಮಾರ್ ಜಿಂದಾಲ್ ಭೂಮಿ ಪರಭಾರೆ ಪ್ರಕರಣವನ್ನು ಸಮರ್ಥಿಸಿಕೊಂಡರು.
ಇನ್ನು ಜಿಂದಾಲ್ ಕಂಪನಿಗೆ ಬಳ್ಳಾರಿಯಲ್ಲಿ ಸಾವಿರಾರು ಎಕರೆ ಜಮೀನು ಪರಭಾರೆ ಮಾಡುವುದನ್ನು ವಿರೋಧಿಸಿ ಬಿಜೆಪಿ ನಾಯಕರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಶಿವಕುಮಾರ್, ‘ಬಹಳ ಸಂತೋಷ. ಈ ವಿಚಾರದಲ್ಲಿ ಅವರು ಇಷ್ಟು ತಡ ಮಾಡಬಾರದಿತ್ತು. ಇವತ್ತಿನಿಂದ ಮಾಡೋ ಬದಲು ಈ ಮುಂಚೆಯೇ ಶುರು ಮಾಡಬೇಕಿತ್ತು. ಕೂಡಲೇ ಧರಣಿ ಮಾಡಲಿ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನೇ ಇದಕ್ಕೆ ಉತ್ತರಿಸುತ್ತೇನೆ. ಬೃಹತ್ ಕೈಗಾರಿಕೆ ಸಚಿವ ಜಾರ್ಜ್ ಅವರ ಜತೆಗೇ ಉತ್ತರ ಕೊಡುತ್ತೇನೆ’ ಎಂದು ಕಾಲೆಳೆದಿದ್ದಾರೆ.
‘ಇಡೀ ಪ್ರಪಂಚ ಕರ್ನಾಟಕದತ್ತ ತಿರುಗಿ ನೋಡುತ್ತಿದೆ. ಪ್ರಧಾನಮಂತ್ರಿಗಳೇ ಬೆಂಗಳೂರಿಗೆ ಬಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ನಡೆಸಿದ್ದಾರೆ. ಭಾರತಕ್ಕೆ ಬಂದು ಬಂಡವಾಳ ಹೂಡಿ ಎಂದು ಕರೆಯುತ್ತಿದ್ದಾರೆ. ಇದು ಬಿಜೆಪಿಯವರಿಗೆ ಅರ್ಥ ಆಗದಿರುವುದು ದುರಂತ’ ಎಂದರು.
‘ಈ ಹಿಂದೆ ನಡೆದ ಗಣಿ ಲೂಟಿಯಿಂದಾಗಿ ಬಳ್ಳಾರಿಯಲ್ಲಿ ನಿರುದ್ಯೋಗ ಸಮಸ್ಯೆ ಯಾವ ಸ್ವರೂಪದಲ್ಲಿದೆ ಎಂಬುದು ತಮಗೆ ಗೊತ್ತಿದೆ. ಅಲ್ಲಿನ ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶ ನಮ್ಮದು. ಉದ್ಯೋಗದ ಜತೆಗೆ ಸರ್ಕಾರಕ್ಕೂ ಆದಾಯ ಬರಬೇಕು. ಹಳ್ಳಿಗಳಿಂದ ಸರ್ಕಾರಕ್ಕೆ ತೆರಿಗೆ ಮೂಲಕ ಹಣ ಬರುವುದಿಲ್ಲ. ಆದರೆ ಕೈಗಾರಿಕೆಗಳ ಮೂಲಕ ಆದಾಯ ಬರುತ್ತದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ, ವಿದ್ಯಾವಂತ ಮಾನವ ಸಂಪನ್ಮೂಲ, ಉತ್ತಮ ಆಡಳಿತ ಇದೆ. ಹಾಗಾಗಿ ಇಲ್ಲಿಗೆ ಬಂದು ಬಂಡವಾಳ ಹೂಡಿಕೆ ಮಾಡಿ ಎಂದು ಪ್ರಧಾನಮಂತ್ರಿಗಳೇ ಸಭೆ ನಡೆಸುತ್ತಿದ್ದಾರೆ. ಅದೇ ರೀತಿ ನಾವು ಕೂಡ ಉದ್ದಿಮೆದಾರರಿಗೆ ಅವಕಾಶ ಕಲ್ಪಿಸಿ, ಜನರಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದೇವೆ. ಮೈಸೂರಿನಲ್ಲಿ ಇನ್ಫೋಸಿಸ್ ಕಂಪನಿಗೆ ಜಾಗ ನೀಡಿದಾಗಲೂ ಇದೇ ರೀತಿ ವಿರೋಧ ವ್ಯಕ್ತಪಡಿಸಿದ್ದರು. ಈಗ ರಾಜ್ಯದ ಪ್ರಗತಿಗೆ ಇನ್ಫೋಸಿಸ್ ಸಾಕಷ್ಟು ಕೊಡುಗೆ ನೀಡಿದೆ. ಸಾವಿರಾರು ಜನಕ್ಕೆ ಉದ್ಯೋಗ ನೀಡಿದೆ’ ಎಂದು ಶಿವಕುಮಾರ್ ಹೇಳಿದರು.
‘ಮೊನ್ನೆ ಸರ್ಕಾರ ಆನ್ ಲೈನ್ ಮೂಲಕ ಮನೆ ನಿವೇಶನ ಪರಿವರ್ತನೆ(ಕನ್ವರ್ಷನ್‍) ಮಾಡಲು ತೀರ್ಮಾನಿಸಿದೆ. ಇದರಿಂದ ಡೆವಲಪರ್ಸ್ ಗಳು ಬರಲಿ, ಬಂಡವಾಳ ಹೂಡಿಕೆ ಮಾಡಲಿ. ಈಗಾಗಲೇ ಬೆಂಗಳೂರಿನಲ್ಲಿ ಸಾಕಷ್ಟು ಪ್ಲಾಟ್ ಗಳು ಖಾಲಿ ಬಿದ್ದಿವೆ. ಜನರಿಗೆ ನಷ್ಟವಾಗುತ್ತಿದೆ. ಬ್ಯಾಂಕ್ ಗಳಿಂದ ಸೂಕ್ತ ನೆರವು ಸಿಗುತ್ತಿಲ್ಲ. ನನ್ನ ತಾಲೂಕಿನಲ್ಲಿ ಯಾರಾದರೂ ಉದ್ಯಮ ಶುರು ಮಾಡುತ್ತೇವೆ ಎಂದು ಮುಂದೆ ಬಂದರೆ ನಾನೇ ಮುಂದೆ ನಿಂತು ಜಾಗ ಕೊಡಿಸುತ್ತೇನೆ. ಕೆಲಸ ಇಲ್ಲದೆ ಜನ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಉದ್ಯೋಗ ಸೃಷ್ಟಿ ನಮ್ಮ ಆದ್ಯತೆ’ ಎಂದು ಸಚಿವ ಡಿ ಕೆ ಶಿವಕುಮಾರ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com