ಕುಟುಂಬದ ಸದಸ್ಯರ ಜೊತೆ ರಾಘವೇಂದ್ರ
ರಾಜಕೀಯ
ರೈಲ್ವೆ ಯೋಜನೆಗೆ ಮೊದಲ ಆದ್ಯತೆ: ರಾಘವೇಂದ್ರ ಮುಂದಿವೆ ಹಲವು ಸವಾಲುಗಳು!
ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಬ್ರೇಕ್ ತೆಗೆದುಕೊಂಡಿದ್ದ ಬಿ,ವೈ ರಾಘವೇಂದ್ರ ಮೂರನೇ ಬಾರಿಗೆ ಗೆದ್ದು ಸಂಸದರಾಗಿದ್ದಾರೆ....
ಶಿವಮೊಗ್ಗ: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಬ್ರೇಕ್ ತೆಗೆದುಕೊಂಡಿದ್ದ ಬಿ.ವೈ. ರಾಘವೇಂದ್ರ ಮೂರನೇ ಬಾರಿಗೆ ಗೆದ್ದು ಸಂಸದರಾಗಿದ್ದಾರೆ.
ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದಿರುವ ರಾಘವೇಂದ್ರ ಶೈಕ್ಷಣಿಕ ಸಂಸ್ಥೆ ನಡೆಸುತ್ತಾರೆ, ಜೊತೆಗೆ ತಮ್ಮ ಎಲ್ಲಾ ಕೌಶಲ್ಯಗಳನ್ನು ಬಳಸಿ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ.
ಸದ್ಯ ಅಭಿವೃದ್ಧಿ ಕಡೆ ತಮ್ಮ ಗಮನ ಹರಿಸಿರುವ ರಾಘವೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾರೆ, ಶಿವಮೊಗ್ಗ ಜಿಲ್ಲೆಯ ಕೊಟೆಗಂಗವೂರು ಗ್ರಾಮದಲ್ಲಿ ರೈಲ್ವೆ ಸ್ಯಾಟಲೈಟ್ ಟರ್ಮಿನಲ್ ನಿರ್ಮಾಣಕ್ಕೆ ಮುಂದಿನ ಬಜೆಟ್ ನಲ್ಲಿ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ರೈಲ್ವೆ ಟರ್ಮಿನಲ್ ಸಂಬಂಧ ರೈಲ್ವೆ ಖಾತೆ ಸಚಿವ ಪಿಯೂಶ್ ಗೋಯೆಲ್ ಅವರ ಜೊತೆಯೂ ಚರ್ಚಿಸಿದ್ದಾಗಿ ಹೇಳಿದ್ದಾರೆ.
ಬಾಕಿ ಉಳಿದಿರುವ ಯೋಜನೆಗಳ ಜೊತೆಗೆ ಚೆನ್ನೈ ಟು ತಿರುಪತಿ ಗೆ ಹೊಸ ರೈಲು ಸೇವೆ ಆರಂಭ,ಇಎಸ್ ಐ ಆಸ್ಪತ್ರೆಯ ನಿರ್ಮಾಣ ಕಾರ್ಯ ಆರಂಭಿಸುವುದು ತಮ್ಮ ಸದ್ಯದ ಗುರಿಯಾಗಿದೆ ಎಂದು ತಿಳಿಸಿದ್ದಾರೆ, ರಾಜ್ಯ ಸಚಿವರ ಉತ್ತಮ ಸಹಾಯದಿಂದ ಶೀಘ್ರವೇ ಭೂಮಿ ಪಡೆದು ರೈಲ್ವೆ ಯೋಜನೆ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರನಾಗಿರುವ ರಾಘವೇಂದ್ರ ಮೃದುವಾಗಿ ಮಾತನಾಡುವ ರಾಜಕಾರಣಿ, 2009 ರಲ್ಲಿ ಜನಪ್ರಿಯ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದರು. ಅವರು ಸಂಸದರಾಗಿದ್ದಾಗ ತಮ್ಮ ತಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಶಿವಮೊಗ್ಗಕ್ಕೆ ರೈಲ್ವೆ ಯೋಜನೆ ಪಡೆಯುವುದು ಸುಲಭವಾಯಿತು.
2014 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಯಡಿಯೂರಪ್ಪ ಗೆದ್ದು ಸಂಸದರಾದರು, ಆ ವೇಳೆ ಶಿಕಾರಿಪುರ ಉಪ ಚುನಾವಣೆಯಲ್ಲಿ ಜಯಗಳಿಸಿದ ರಾಘವೇಂದ್ರ ವಿಧಾನಸಭೆ ಪ್ರವೇಶಿಸಿದರು.
ಸಂಸದ ರಾಘವೇಂದ್ರ ಅವರಿಗೆ ಹಲವು ಸವಾಲು ಗಳು ಮುಂದಿವೆ, ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ ಮುಚ್ಚಲು ಬಿಡಬಾರದು, ಅಲ್ಲಿನ ನೌಕರರನ್ನು ನಿರುದ್ಯೋಗಿಗಳನ್ನಾಗಿ ಮಾಡಬಾರದು ಎಂದು ಅಲ್ಲಿನ ಕೆಲಸಗಾರರು ಮನವಿ ಮಾಡಿದ್ದಾರೆ, ಕಾರ್ಖಾನೆ ಉಳಿಸುವುದಾಗಿ ರಾಘವೇಂದ್ರ ಭರವಸೆ ಕೂಡ ನೀಡಿದ್ದಾರೆ.
ಬಗರ್ ಹುಕುಂ ರೈತರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುವುದು ಕೂಡ ರಾಘವೇಂದ್ರ ಮುಂದಿರುವ ಜವಾಬ್ದಾರಿ. ಇನ್ನೂ ಮತ್ತೊಂದು ಪ್ರಮುಖ ವಿಷಯ ಅಡಿಕೆ ಬೆಳೆಗಾರರದ್ದು, ಮೋದಿ ನೇತೃತ್ವದ ಸರ್ಕಾರ ರೈತ ಸಮುದಾಯದ ಹಿತಾಶಕ್ತಿ ಕಾಯುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ