ಬಂಡಾಯ ಶಮನಕ್ಕೆ ಮುಂದಾದ ಸಿಎಂ: ಶಾಸಕ ಸುಧಾಕರ್ ಗೆ ಒಲಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಿರಿ

ಕಾಂಗ್ರೆಸ್ ಪಕ್ಷ ಅತೃಪ್ತ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಮೂಲಕ ಬಂಡಾಯ ಶಮನಕ್ಕೆ ಮುಂದಾಗಿದ್ದು, ಕೊನೆಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಕಾಂಗ್ರೆಸ್ ಅಸಮಾಧಾನಿತ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಯಶಸ್ವಿಯಾಗಿದ್ದಾರೆ.
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್
ಬೆಂಗಳೂರು: ಕಾಂಗ್ರೆಸ್ ಪಕ್ಷ ಅತೃಪ್ತ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಮೂಲಕ ಬಂಡಾಯ ಶಮನಕ್ಕೆ ಮುಂದಾಗಿದ್ದು, ಕೊನೆಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಕಾಂಗ್ರೆಸ್ ಅಸಮಾಧಾನಿತ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಯಶಸ್ವಿಯಾಗಿದ್ದಾರೆ. 
ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾನಕ್ಕೆ ಸಿ.ಜಯರಾಂ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು, ಕೆ.ಸುಧಾಕರ್ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅಧಿಕೃತ ಆದೇಶ ಹೊರಬೀಳುವುದು ಬಾಕಿಯಿದೆ. 
ಈ ಸಂಬಂಧ ಟ್ವೀಟ್ ಮಾಡಿರುವ ಸುಧಾಕರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಕ ಮಾಡಿರುವುದಕ್ಕೆ ರಾಹುಲ್​​ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 
ಕಳೆದ ನಾಲ್ಕು ತಿಂಗಳ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೆ.ಸುಧಾಕರ್ ಅವರನ್ನು ನೇಮಕ ಮಾಡುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಶಿಫಾರಸು ಮಾಡಿದ್ದರು. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಜ್ಞರನ್ನಷ್ಟೇ ನೇಮಕ ಮಾಡಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೆ.ಸುಧಾಕರ್ ನೇಮಕಕ್ಕೆ ಅಡ್ಡಿಯುಂಟು ಮಾಡಿದ್ದರು. 
ಮಾಲಿನ್ಯ ನಿಯಂತ್ರಣ ಮಂಡಳಿಗೆ ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಹಾಗೂ ದೇವೇಗೌಡರ ಸಂಬಂಧಿ ಪ್ರೊ. ರಂಗಪ್ಪ ಅವರನ್ನು ತರುವ ಸಲುವಾಗಿ ಸುಧಾಕರ್ ಅವರಿಗೆ ಈ ಹುದ್ದೆ ನೀಡಿರಲಿಲ್ಲ. 
ಆದರೆ ಕಳೆದ ಫೆಬ್ರವರಿ 28 ರಂದು ಸೇವೆಯಿಂದ ನಿವೃತ್ತರಾಗಿದ್ದ ಐಎಫ್ಎಸ್ ಅಧಿಕಾರಿ ಸಿ.ಜಯರಾಮ್ ಅವರನ್ನು ಈ ಹುದ್ದೆಗೆ ನೇಮಿಸಲಾಗಿತ್ತು. ಇದು ಮೈತ್ರಿ ಸರ್ಕಾರದ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು.
ಸುಧಾಕರ್ ಅವರಿಗೆ ಸಚಿವ ಸ್ಥಾನ ತಪ್ಪಿದಕ್ಕಾಗಿ ಅವರ ಬೆಂಬಲಿಗರು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಕಳೆದ ಜನವರಿ ಮೊದಲ ವಾರದಲ್ಲಿ ಸುಧಾಕರ್ ಅವರ ಬೆಂಬಲಿಗರನ್ನು ಪಕ್ಷದಿಂದ ಅಮಾನತು ಮಾಡಿದ್ದ ಕೆಪಿಸಿಸಿ ಒಂದು ವಾರದಲ್ಲಿಯೇ ಅಮಾನತು ಆದೇಶ ರದ್ದುಪಡಿಸಿತ್ತು.
ಸಚಿವಾಕಾಂಕ್ಷಿಯಾಗಿದ್ದ ಸುಧಾಕರ್ ಅವರಿಗೆ ನಿಗಮ ಮಂಡಳಿಯ ಭರವಸೆ ನೀಡಲಾಗಿತ್ತು. ಸುಧಾಕರ್ ಅವರನ್ನು ಈ ಹುದ್ದೆಗೆ ಶಿಫಾರಸು ಎಐಸಿಸಿ ಹೊರಡಿಸಿದ್ದ ಶಿಫಾರಸಿಗೆ ಕುಮಾರಸ್ವಾಮಿ ಹಾಗೂ ದೇವೇಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಬಹಿರಂಗವಾಗಿಯೇ ಸುಧಾಕರ್ ಕಿಡಿಕಾರಿದ್ದರು. ''ಪುಟಗೋಸಿ ಚೇರ್ ಮನ್ ಗಿರಿ ಯಾರಿಗೆ ಬೇಕು.? ಜೆಡಿಎಸ್ ಅಭ್ಯರ್ಥಿಯನ್ನು ಎರಡು ಬಾರಿ ಸೋಲಿಸುವ ಮೂಲಕ ಶಾಸಕನಾಗಿರುವ ನನಗೆ ಕ್ಷೇತ್ರದ ಜನ ಶಕ್ತಿಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದರು.
ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಹುದ್ದೆ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಕೆ.ಸುಧಾಕರ್ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು, ಶಾಸಕ ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದರು.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವ ಸಿದ್ದರಾಮಯ್ಯ ಪಕ್ಷ ಸೇರಿದಂತೆ ಮೈತ್ರಿ ಸರ್ಕಾರದಲ್ಲಿ ಒಂದಿಷ್ಟು ದಿಢೀರ್ ಬದಲಾವಣೆಗೆ ಕಾರಣರಾಗಿದ್ದಾರೆ.
ಬುಧವಾರವೇ ಕಾಂಗ್ರೆಸ್ ಹೈಕಮಾಂಡ್ ನಿಗಮ ಮಂಡಳಿಗೆ ಕೆ.ಸುಧಾಕರ್ ಅವರನ್ನು ನೇಮಿಸುವಂತೆ ಕುಮಾರಸ್ವಾಮಿ ಅವರಿಗೆ ಸೂಚಿಸಿತ್ತು. ಈ ಸಂಬಂಧ ಹೆಚ್.ಡಿ.ದೇವೇಗೌಡ ಅವರ ಜೊತೆ ಚರ್ಚಿಸಿದ ಕುಮಾರಸ್ವಾಮಿ ನೇಮಕಾತಿಗೆ ಹಸಿರು ನಿಶಾನೆ ತೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com