ಉಲ್ಟಾ ಹೊಡೆದ ಮಾಜಿ ಪ್ರಧಾನಿ, ಮಧ್ಯಂತರ ಚುನಾವಣೆ ಹೇಳಿಕೆ ತಳ್ಳಿಹಾಕಿದ ದೇವೇಗೌಡರು

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ರಾಜ್ಯದಲ್ಲಿ ಮಧ್ಯಂತರ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ...
ಎಚ್ ಡಿ ದೇವೇಗೌಡ
ಎಚ್ ಡಿ ದೇವೇಗೌಡ
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ರಾಜ್ಯದಲ್ಲಿ ಮಧ್ಯಂತರ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಶ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಈಗ ಉಲ್ಟಾ ಹೊಡೆದಿದ್ದು, ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಶುಕ್ರವಾರ ಆರೋಪಿಸಿದ್ದಾರೆ.
ದೇವೇಗೌಡರ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ. ಅವರು ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಹೇಳಿಲ್ಲ. ಮುಂದಿನ ವರ್ಷ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ ಎಂದು ದೇವೇಗೌಡರು ಹೇಳಿರುವುದಾಗಿ ಜೆಡಿಎಸ್ ಮಾಧ್ಯಮ ಕಾರ್ಯದರ್ಶಿ ಕೆ ಗುರುಪ್ರಸಾದ್ ಅವರು ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ದೇವೇಗೌಡ ಅವರು, ರಾಜ್ಯದ ದೋಸ್ತಿ ಸರ್ಕಾರ ಹೆಚ್ಚು ದಿನ ಬಾಳಿಕೆ ಬರುವಂತೆ ತೋರುತ್ತಿಲ್ಲ. ದೋಸ್ತಿ ಸರ್ಕಾರದ ಭವಿಷ್ಯ ಕಾಂಗ್ರೆಸ್​ ಮುಖಂಡರ ಕೈಯಲ್ಲಿದೆ. ಹೀಗೆ ಮುಂದುವರಿದರೆ ಮಧ್ಯಂತರ ಚುನಾವಣೆ ನಡೆಯೋ ಬಗ್ಗೆ ಸಂಶಯವೇ ಇಲ್ಲ ಎಂದಿದ್ದರು. ದೇವೇಗೌಡರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟು ಮಾಡಿತ್ತು.
ಈ ಮಧ್ಯೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ, ಕುಮಾರಸ್ವಾಮಿ ಅವರು ಮುಂದಿನ ನಾಲ್ಕು ವರ್ಷಗಳು ಪೂರೈಸುತ್ತಾರೆ. ದೇವೇಗೌಡ ಇನ್ನು ನಾಲ್ಕು ವರ್ಷ ಕೆಲಸ ಮಾಡುವುದಕ್ಕೆ ಆಗುತ್ತಾ ಎಂದು ಭಾವಿಸಬೇಡಿ. ಜೆಡಿಎಸ್‌ನಲ್ಲಿ ಏನು ಗೊಂದಲ ಇಲ್ಲ. ಬಿಜೆಪಿಯವರಿಗೂ ಛಲ ಇದೆ. ಮೂರು ದಿನಕ್ಕೆ ಸಿಎಂ ಆದವರನ್ನು ತೆಗೆದರಲ್ಲ ಎನ್ನುವ ಭಾವನೆ ಇದೆ. ಹೀಗೆ ಆದಾಗ ಯಾರಾದ್ರು ಸುಮ್ಮನೆ ಇರುತ್ತಾರಾ? ಪ್ರಯತ್ನ ಮಾಡುತ್ತಲೇ ಇರುತ್ತಾರೆ ಎಂದರು.
ಪಕ್ಷ ಬಿಟ್ಟು ಹೋಗುತ್ತಾರೆ ಎಂದವರೆಲ್ಲ ನಮ್ಮ ಜತೆಯೇ ಇದ್ದಾರೆ. ಕಾಂಗ್ರೆಸ್‌ನಲ್ಲೂ ಸಿದ್ದರಾಮಯ್ಯ ಅವರ ಜತೆನೇ ಇದ್ದಾರೆ. ಕಾಂಗ್ರೆಸ್ ನಿಂದ 5 ಜೆಡಿಎಸ್ ನಿಂದ ಇಬ್ಬರು ಬಿಜೆಪಿಗೆ ಬರ್ತಾರೆ ಎಂದು ಹೇಳುತ್ತಲೆ ಇದ್ದಾರೆ. ನಾವು ಸೋತಿರುವ ಬಗ್ಗೆ ರಾಹುಲ್ ಗಾಂಧಿ ಜತೆ ಮಾತನಾಡಲೇ ಇಲ್ಲ. ಆದರೆ ಈ ಪ್ರಾದೇಶಿಕ ಪಕ್ಷವನ್ನು ಉಳಿಸಲೇಬೇಕಿದೆ. ಎರಡು ಪಕ್ಷದವರು ಸೇರಿ ಕೆಲಸ ಮಾಡಿದ್ದಾರೆ. ಈ ಸಾಧನೆ ಕುಮಾರಸ್ವಾಮಿ ಸಾಧನೆಯಲ್ಲ. ಮೈತ್ರಿ ಸರ್ಕಾರದ ಸಾಧನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com