ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಲೀಲಾದೇವಿ ನೇಮಕ

ಪಕ್ಷದ ನಿಷ್ಠಾವಂತ ನಾಯಕಿ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅವರನ್ನು ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.....
ಲೀಲಾದೇವಿ ಆರ್ ಪ್ರಸಾದ್
ಲೀಲಾದೇವಿ ಆರ್ ಪ್ರಸಾದ್
Updated on
ಬೆಂಗಳೂರು: ಪಕ್ಷದ ನಿಷ್ಠಾವಂತ ನಾಯಕಿ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅವರನ್ನು  ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಸಮುದಾಯದವರನ್ನು ನೇಮಿಸಲು ಉದ್ದೇಶಿಸಿರುವ ದೇವೇಗೌಡರು, ಮಹಿಳಾ ಘಟಕದ ಜವಾಬ್ದಾರಿಯನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರುವ ಡಾ. ಲೀಲಾದೇವಿ ಆರ್. ಪ್ರಸಾದ್ ಅವರಿಗೆ ವಹಿಸಿದ್ದಾರೆ.
ಲೀಲಾದೇವಿ ಪ್ರಸಾದ್, 1957ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ ಸಾಮಾಜಿಕ ರಾಜಕೀಯ ಬದುಕನ್ನು ಪ್ರಾರಂಭಿಸಿದ್ದರು. ಅಥಣಿ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿ, ಎಸ್. ಆರ್. ಬೊಮ್ಮಾಯಿ, ಹೆಚ್. ಡಿ. ದೇವೇಗೌಡ ಹಾಗೂ ಜೆ. ಎಚ್. ಪಟೇಲ್ ಅವರ ಸಂಪುಟದಲ್ಲಿ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನ ಸೇವೆ, ವಾರ್ತಾ, ಕನ್ನಡ ಸಂಸ್ಕೃತಿ, ಸಣ್ಣ ನೀರಾವರಿ ಸಚಿವರಾಗಿದ್ದರು.
ಹೀಗೆ ಕೇಂದ್ರ ಹಾಗೂ ರಾಜ್ಯಮಟ್ಟದ ಹಲವು ಸಂಸ್ಥೆಗಳಲ್ಲಿ ಇಂದಿಗೂ ಸೇವೆ ಸಲ್ಲಿಸುತ್ತಿರುವ ಡಾ. ಲೀಲಾದೇವಿ ಪ್ರಸಾದ್ ಅವರು ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಉಪಾಧ್ಯಕ್ಷರಾಗಿ, ಈಗಲೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 
ಗುರುವಾರ ಜೆ.ಪಿ.ಭವನದಲ್ಲಿ ದೇವೇಗೌಡರ ನೇತೃತ್ವದಲ್ಲಿ ನಡೆದ ಮಹಿಳಾ ಘಟಕದ ಸಭೆಯಲ್ಲಿ ಪಕ್ಷಕ್ಕೆ ಹೊಸ ರೂಪರೇಷೆ ನೀಡುವ ಹಾಗೂ ಸಂಘಟನೆಯಲ್ಲಿ ಮಹಿಳಾ ಕಾರ್ಯಕರ್ತರ ಸಕ್ರಿಯ ಪಾಲ್ಗೊಳ್ಳುವಿಕೆ ಕುರಿತು ಚರ್ಚೆ ನಡೆಸಲಾಯಿತು.
ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಹೊತ್ತಿರುವ ದೇವೇಗೌಡರು, ಎಲ್ಲಾ ವಿಭಾಗಗಳಿಗೆ ಹೊಸ ಚೈತನ್ಯ ನೀಡುವ ಜೊತೆಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ. ಮಹಿಳಾ ಘಟಕದ ರಾಜ್ಯಾಧ್ಯಕ್ಷರ ನೇಮಕ ಜೊತೆ ಬೆಂಗಳೂರು ನಗರದ ಮಹಿಳಾ ಘಟಕಕ್ಕೆ ಅಲ್ಪಸಂಖ್ಯಾತ ನಾಯಕಿ ಋತ್ ಮನೋರಮಾ ಅವರನ್ನು ಅಧ್ಯಕ್ಷೆಯಾಗಿ ನೇಮಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲಾ ವಿಭಾಗಳಿಗೂ ಹೊಸತನ ನೀಡಲಾಗುತ್ತಿದೆ. ಮಹಿಳಾ ಘಟಕದ ಪದಾಧಿಕಾರಿಗಳ ಜೊತೆ ಚರ್ಚಿಸಿ ಸರ್ವಾನುಮತದಿಂದ ನೂತನ ಅಧ್ಯಕ್ಷರನ್ನು ನೇಮಿಸಲಾಗಿದೆ ಎಂದರು. 
ಮಹಿಳಾ ಘಟಕದ ನೂತನ ರಾಜ್ಯಾಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ಹಿಂದೆ ಶೇ. 33 ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತಮ್ಮ ನೇತೃತ್ವದಲ್ಲಿ ಧ್ವನಿಯೆತ್ತಲಾಗಿತ್ತು. ಪ್ರಸಕ್ತ ರಾಜ್ಯಸಭೆಯಲ್ಲಿ ಕಾಯಿದೆ ಜಾರಿಯಾಗಿದ್ದರೂ ಲೋಕಸಭೆಯಲ್ಲಿ ಇದನ್ನು ತಡೆಯಲಾಗಿದೆ. ಮಹಿಳಾ ಮೀಸಲಾತಿ ಜಾರಿ ಕುರಿತು ಪ್ರಧಾನಿ ಮೋದಿ ನಿರ್ಧಾರವನ್ನು ಕೈಗೊಳ್ಳಬೇಕು. ದೇವೇಗೌಡರು ಒಪ್ಪಿಗೆ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಮಹಿಳಾ ಮೀಸಲಾತಿ ಕುರಿತು ಹೋರಾಟ ಮುಂದುವರೆಸುತ್ತೇನೆ ಎಂದರು.
ತಮ್ಮ ಮೇಲೆ ಭರವಸೆ ಇಟ್ಟು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಜವಾಬ್ದಾರಿ ವಹಿಸಿದ್ದು, ಅವರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಪ್ರತಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ. ಪಕ್ಷ ಸಂಘಟನೆಯಲ್ಲಿ ಪುರುಷ ಕಾರ್ಯಕರ್ತರ ಸಮನಾಗಿ ಮಹಿಳಾ ಕಾರ್ಯಕರ್ತರು ತೊಡಗುವಂತೆ ಮಾಡುತ್ತೇನೆ. ಪಕ್ಷದ ಚಿಹ್ನೆಯೇ ಮಹಿಳೆ. ಹೀಗಾಗಿ ಮಹಿಳೆಯರು ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.
ಯುಎನ್‍ಐ ಕನ್ನಡ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಲೀಲಾದೇವಿ ಪ್ರಸಾದ್, ತಮ್ಮ ಪಕ್ಷ ನಿಷ್ಠೆಯನ್ನು ಗುರುತಿಸಿ ಈ ಜವಾಬ್ದಾರಿಯನ್ನು ನೀಡಿದ್ದು, ತಮ್ಮ ಮುಂದೆ ಅನೇಕ ಸವಾಲುಗಳಿವೆ. ಪಕ್ಷದಲ್ಲಿ ನಾನು ಹಿರಿಯಳು. ಸಂಘಟನೆ ಹೇಗೆ ಮಾಡಬೇಕು ಎಂಬ ಬಗ್ಗೆ ನನ್ನ ಹಿಂದೆ ಇತಿಹಾಸವೇ ಇದೆ. 
ನಾನು ಯಾವುದೇ ಪಕ್ಷಾಂತರ ಮಾಡದೇ ಅಂದಿನಿಂದ ಇಲ್ಲಿಯವರೆಗೂ ಪಕ್ಷದ ಕಷ್ಟಸುಖಗಳಲ್ಲಿ ಭಾಗಿಯಾಗಿದ್ದೇನೆ. ಪಕ್ಷದ ಸಂಘಟನೆಯಲ್ಲಿ ಮಹಿಳೆಯರು ಸಕ್ರಿರಾಗುವಂತೆ ನೋಡಿಕೊಳ್ಳಬೇಕು. ಸಕ್ರಿಯ ಮಹಿಳಾ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಆಗಬೇಕಿದೆ. ಪಕ್ಷದ ತತ್ವ ಸಿದ್ಧಾಂತಗಳನ್ನು ಮೊದಲಿಗೆ ಮಹಿಳೆಯರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು ಎಂದರು.
ಪಕ್ಷದ ಕಚೇರಿಯಲ್ಲಿ ಕಸ ಗುಡಿಸುವುದರಿಂದ ಹಿಡಿದು ಎಲ್ಲಾ ಕೆಲಸವನ್ನು ಮಾಡಿದ್ದೆ. ಬಳಿಕವಷ್ಟೆ ಪಕ್ಷ ನನ್ನ ನಿಷ್ಠೆಯನ್ನು ಗುರುತಿಸಿತ್ತು. ಆದರೆ ಕಾಲ ಇಂದು ಬದಲಾಗಿದ್ದು, ಪಕ್ಷಕ್ಕೆ ಸೇರುವ ಮಹಿಳೆಯರು ಮೊದಲು ತಮಗೆ ಯಾವ ಹುದ್ದೆ ನೀಡುತ್ತೀರಿ ಏನು ಲಾಭ ಎಂದು ಪ್ರಶ್ನಿಸಿಯೇ ಬರುತ್ತಾರೆ. ಪಕ್ಷ ಸಂಘಟನೆ ಎನ್ನುವುದು ಅಷ್ಟು ಸುಲಭವಾಗಿಲ್ಲ. ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಮಹಿಳೆಯರಿಗೆ ವಿಶ್ವಾಸ ಮೂಡಿಸುವ ಕೆಲಸ ಮೊದಲಾಗಬೇಕಿದೆ. ಎಂದರು. 
ರಾಜ್ಯದಲ್ಲಿ ಪ್ರಸಕ್ತ. ಪೂರ್ಣಪ್ರಮಾಣದ ಸರ್ಕಾರವಿಲ್ಲ. ಸರ್ಕಾರದಲ್ಲಿ ಮಹಿಳೆಯರಿಗೆ ಸ್ಥಾನಮಾನ ಸಿಗುವುದು ಹೊಂದಾಣಿಕೆ ಮೇಲೆ ಅವಲಂಬಿಸಿದೆ. ರಾಜಕೀಯವಾಗಿ ಪಕ್ಷದಲ್ಲಿ ಮಹಿಳೆಯರಿಗೆ ಕೊಡುವ ಸ್ಥಾನಮಾನ ಹಾಗೂ ಕಾರ್ಯಕರ್ತರಿಗೆ ಪಕ್ಷದಲ್ಲಿ ಸಿಗುವ ಸ್ಥಾನಮಾನಗಳ ಕುರಿತು ಚರ್ಚೆ ನಡೆಸಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com