ಬಾಗಲಕೋಟೆ: ಹಣೆಗೆ ನಾಮ ಇಟ್ಟುಕೊಳ್ಳುವುದಕ್ಕೆ ತಮಗೆ ಭಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕುಂಕುಮ ಇಡಲು ಬಂದ ಗ್ರಾಮಸ್ಥರಿಗೆ ಹೇಳಿದ್ದಾರೆ.
ಈ ಹಿಂದೆ ಸ್ವಕ್ಷೇತ್ರಕ್ಕೆ ಬಂದಾಗ ಕೆಂಪು ನಾಮ ಹಾಕಿದವರನ್ನ ಕಂಡರೆ ಭಯ ಎಂದು ಹೇಳುವ ಮೂಲಕ ವಿವಾದಕ್ಕೆ ಮೈ ಮೇಲೆ ಎಳೆದುಕೊಂಡಿದ್ದರು.
ಬಾದಾಮಿಯ ಚಿಮ್ಮನಕಟ್ಟಿ ಗ್ರಾಮದಲ್ಲಿ ಇಂದು ಸಿದ್ದರಾಮಯ್ಯಅವರು ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಬಳಿಕ ಆರ್ಚಕರೊಬ್ಬರು, ಸಿದ್ದರಾಮಯ್ಯ ಅವರ ಹಣೆಗೆ ನಾಮ ಇಡಲು ಬಂದಾಗ, ಅವರು ಬೇಡಪ್ಪ ಬೇಡ ನನಗೆ ಕುಂಕುಮ ಇಟ್ಟುಕೊಳ್ಳುವುದಕ್ಕೆ ಭಯ ಆಗುತ್ತದೆ ಎಂದು ನಿರಾಕರಿಸಿದ್ದಾರೆ.
ಈ ಹಿಂದೆ ಸ್ವಕ್ಷೇತ್ರಕ್ಕೆ ಬಂದಾಗ ಕೆಂದೂರ ಕೆರೆಗೆ ನೀರು ತುಂಬಿಸೋ ಕಾಮಗಾರಿ ವೇಳೆ ಗುತ್ತಿಗೆದಾರನ ಹಣೆಯಲ್ಲಿದ್ದ ನಾಮವನ್ನು ಕಂಡು ಸಿದ್ದರಾಮಯ್ಯ, ನಾಮ ಹಾಕಿದವರನ್ನು ಕಂಡ್ರೆ ಭಯ ಎಂದು ಹೇಳಿದ್ದರು. ಅವರ ಈ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಬಿಜೆಪಿ ನಾಯಕರಿಂದ ಹಿಡಿದು ಹಿಂದೂಪರ ಕಾರ್ಯಕರ್ತರು ಉದ್ದದ ನಾಮ ಬಳಿದುಕೊಂಡು ನಾನು ಹಿಂದೂ ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಲು ತಮ್ಮ ಫೋಟೋ ಶೇರ್ ಮಾಡಿದ್ದರು.
ಮತ್ತೊಂದು ಘಟನೆಯಲ್ಲಿ ಸಿದ್ದರಾಮಯ್ಯ ಅವರ ಶೂ ಎತ್ತಿ ಕೊಡಲು ಮುಂದಾಗ ಕಾಂಗ್ರೆಸ್ ಯುವ ಮುಖಂಡನಿಗೆ 'ಬೇಡಪ್ಪ ಬೇಡ ಟಿವಿಯವರು ಇದ್ದಾರೆ ನಾನೇ ಹಾಕೊಂತೀನಿ' ಎಂದು ಹೇಳಿದ್ದಾರೆ. ಕಾಕನೂರು ಗ್ರಾಮದ ಹುತಾತ್ಮ ಯೋಧನ ಮನೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಹುತಾತ್ಮ ಯೋಧನ ಮನೆಯಿಂದ ಹೊರಬರುವಾಗ ಶೂ ಎತ್ತಿಕೊಡಲು ಯುವಮುಖಂಡ ಮಹಾಂತೇಶ ಹಟ್ಟಿಎಂಬಾತ ಮುಂದದಾಗ ಸಿದ್ದರಾಮಯ್ಯ ಬೇಡಪ್ಪ ಬೇಡ ಎಂದು ತಡೆದು ತಾವೇ ಬಗ್ಗಿ ಶೂ ಹಾಕಿಕೊಂಡಿದ್ದಾರೆ.
ಇದಕ್ಕೂ ಮುನ್ನ ಬಾದಾಮಿ ತಾಲೂಕಿನ ಆಲೂರ ಎಸ್ ಕೆ ಗ್ರಾಮದಲ್ಲಿ ರಸ್ತೆ ಸಿಮೆಂಟೀಕರಣಕ್ಕೆ ಚಾಲನೆ ನೀಡಿ ಬಳಿಕ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಪಿಡಿಓಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. 'ಯಾರ ಬಳಿಯಾದರೂ ಅಭಿವೃದ್ದಿ ಅಧಿಕಾರಿಗಳು (ಪಿಡಿಓ) ಐದು ಪೈಸೆ ತೆಗೆದುಕೊಂಡರೆ ಕ್ರಿಮಿನಲ್ ಕೇಸ್ ಹಾಕಿಸುತ್ತೇನೆ. ಪಿಡಿಒಗಳೇನಾದರೂ ಗ್ರಾಮಸಭೆಯಲ್ಲಿ ಸದಸ್ಯರ ಶಿಫಾರಸ್ಸಿಗೆ ಮನೆಗಳನ್ನು ಹಂಚಿಕೆ ಮಾಡಿದರೆ, ನಿಮ್ಮನ್ನು ಬಲಿ ಹಾಕಿಬಿಡ್ತೀನಿ ಹುಷಾರ್. ಸದಸ್ಯರು ಅಷ್ಟೇ ತಮ್ಮ ನೆಂಟರಿಗೆ ಮನೆ ನೀಡುವುದು ಕಂಡು ಬಂದರೆ ಕ್ರಿಮಿನಲ್ ಕೇಸು ಬೀಳುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಪಿಡಿಓಗಳು ಹಳ್ಳಿಗಳಿಗೆ ಭೇಟಿ ನೀಡಿ,ಮನೆ ಮನೆಗೆ ಹೋಗಿ ಯಾರಿಗೆ ಮನೆಯಿಲ್ಲ ಎಂಬುದನ್ನು ಸರ್ವೆ ಮಾಡಿ ಬಡವರಿಗೆ ಮನೆ ಕೊಡಬೇಕು ಎಂದು ಪಿಡಿಓಗಳಿಗ ಕಟ್ಟಪ್ಪಣೆ ಮಾಡಿದ್ದಾರೆ.
ರಸ್ತೆ ಗುದ್ದಲಿ ಪೂಜೆ ಕಾಮಗಾರಿ ಬಳಿಕ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಮಹಿಳೆಯೋರ್ವಳು ಒಂದೇ ಕುಟುಂಬದವರಿಗೆ ಐದಾರು ಮನೆ ನೀಡಿದ್ದಾರೆಂದು ದೂರು ನೀಡಿದರು. ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಪಿಡಿಓ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ, ಅಧ್ಯಕ್ಷರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.