ಸುಮಲತಾ ಅಬರೀಶ್
ಸುಮಲತಾ ಅಬರೀಶ್

ಮಂಡ್ಯ ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿದ ಸುಮಲತಾ ಅಂಬರೀಶ್

'ನಾಲೆಗೆ ನೀರು ಹರಿಸಿ ರೈತರು ಹಾಗೂ ಬೆಳೆ ಉಳಿಸಿ' ಎಂದು ಆಗ್ರಹಿಸಿ ಮಂಡ್ಯದ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಮಂಡ್ಯ ಸಂಸದೆ...
Published on
ಬೆಂಗಳೂರು: 'ನಾಲೆಗೆ ನೀರು ಹರಿಸಿ ರೈತರು ಹಾಗೂ ಬೆಳೆ ಉಳಿಸಿ' ಎಂದು ಆಗ್ರಹಿಸಿ ಮಂಡ್ಯದ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬೆಂಬಲ ಘೋಷಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆರೆ ಕಟ್ಟೆಗಳನ್ನು ತುಂಬಿಸಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ನಿವಾರಿಸುವಂತೆ ರೈತರು ಹೋರಾಟ ನಡೆಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ನಡೆಯುತ್ತಿರುವ ಕಾವೇರಿ ಮುಷ್ಕರಕ್ಕೆ ಸದಾ ನನ್ನ ಬೆಂಬಲವಿದೆ. ಈಗಾಗಲೇ ಎರಡು ಟಿಎಂಸಿ ನೀರನ್ನು ಹರಿಸುವಂತೆ ಪ್ರಧಾನಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಹಾಗೆಯೇ ಕೇಂದ್ರ ಜಲ ಶಕ್ತಿ ಸಚಿವರಿಗೂ ಮನವಿ ಮಾಡಿದ್ದೇನೆ ಎಂದು ಸುಮಲತಾ ಅಂಬರೀಶ್​​ ಟ್ವೀಟ್ ಮಾಡಿದ್ದಾರೆ.
ಮಂಡ್ಯದಲ್ಲಿನ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ದರ್ಶನ್​​ ಪುಟ್ಟಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೂ ಸರ್ಕಾರ ತಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ ಎಂದು ಹೋರಾಟ ನಿರತ ರೈತರು ಆಕ್ರೋಷಗೊಂಡಿದ್ದಾರೆ. ಸರ್ಕಾರ ನಮ್ಮ ಹೋರಾಟಕ್ಕೆ ಮಣಿಯದಿದ್ದಲ್ಲಿ ಜಿಲ್ಲಾಧಿಕಾರಿ‌ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಇನ್ನು, ಕಳೆದ 6 ದಿನಗಳಿಂದ ನೀರಿಗಾಗಿ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರದ ಸ್ಪಂದಿಸದ ಹಿನ್ನಲೆಯಲ್ಲಿ ರೈತರು ಮತ್ತಷ್ಟು ರೊಚ್ಚಿಗೆದ್ದಿದ್ದಾರೆ. ಇಂದು ಮದ್ದೂರು ಪಟ್ಟಣದ ತಹಶೀಲ್ದಾರ್ ಮತ್ತು ಕಾವೇರಿ ನೀರಾವರಿ ಕಚೇರಿಗೆ ದನ ಕರು, ಎಮ್ಮೆಗಳನ್ನು ಕಚೇರಿ ಬಳಿ ಕಟ್ಟಿಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯ ಕಾವೇರಿ ನೀರಾವರಿ ನಿಗಮ ಕೇಂದ್ರ ಕಚೇರಿಯಲ್ಲಿ ಮಾಡುತ್ತಿದ್ದ ಪ್ರತಿಭಟನೆಯನ್ನು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೂ ವಿಸ್ತರಣೆ ಮಾಡುವ ಮೂಲಕ ಸರ್ಕಾರಕ್ಕೆ ಹೋರಾಟದ ಬಿಸಿಮುಟ್ಟಿಸಿದ್ದಾರೆ.
ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾದರೂ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿದ್ದು, ನೀರು ಹರಿಸದಿದ್ದರೆ ಕುಟುಂಬದೊಂದಿಗೆ ಸಾಮೂಹಿಕ ಆತ್ಮಹತ್ಯೆಯೊಂದೇ ದಾರಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com