ಈಶ್ವರಪ್ಪ, ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ: ಸಿದ್ದರಾಮಯ್ಯ ವಾಗ್ದಾಳಿ

ತಾವು ಮಾಜಿ ಮುಖ್ಯಮಂತ್ರಿ ಆಗಿರುವುದರಿಂದ ಮೈತ್ರಿ ಸರ್ಕಾರದ ಸಚಿವರು ತಮ್ಮ ಮಾತು ಕೇಳುತ್ತಾರೆ. ಹಾಗಾಗಿ ಕೆಲಸಗಳು ಬೇಗ ನಡೆಯುತ್ತವೆ ಎಂದು ಬಾದಾಮಿ ಶಾಸಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
ಈಶ್ವರಪ್ಪ, ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
ಈಶ್ವರಪ್ಪ, ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
Updated on
ಬಾಗಲಕೋಟೆ: ತಾವು ಮಾಜಿ ಮುಖ್ಯಮಂತ್ರಿ ಆಗಿರುವುದರಿಂದ ಮೈತ್ರಿ ಸರ್ಕಾರದ ಸಚಿವರು ತಮ್ಮ ಮಾತು ಕೇಳುತ್ತಾರೆ. ಹಾಗಾಗಿ ಕೆಲಸಗಳು ಬೇಗ ನಡೆಯುತ್ತವೆ ಎಂದು ಬಾದಾಮಿ ಶಾಸಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗುಳೇದಗುಡ್ಡದಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ತಮಗೆ ಮತ ನೀಡಿ ಗೆಲ್ಲಿಸಿದ ಬಾದಾಮಿ ಜನರ ಋಣ ತೀರಿಸಬೇಕು. ಮೈಸೂರಿನಿಂದ ಬಂದವನಾದ ನನಗೆ ಮತ ಹಾಕಿ ಆಶೀರ್ವಾದ ಮಾಡಿದ್ದೀರಿ. ಶಾಸಕನಾಗಿ ಆಯ್ಕೆ ಮಾಡಿ ಕಳಿಸಿದ್ದೀರಿ. ನಿಮ್ಮ ಋಣ ನಾನು ತೀರಿಸಬೇಕಲ್ಲ.ಅದಕ್ಕಾಗಿ ಇನ್ನೂ ಹೆಚ್ಚಿನ ಕೆಲಸ ಮಾಡಬೇಕೆನ್ನುವ ಉದ್ದೇಶ ತಮ್ಮದು.ಇಡೀ ರಾಜ್ಯದಲ್ಲೇ ಬಾದಾಮಿ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುತ್ತೇನೆ. ತಾವು ಮಾಜಿ ಮುಖ್ಯಮಂತ್ರಿ ಆಗಿರುವುದರಿಂದ ಮಂತ್ರಿಗಳು ತಮ್ಮ ಮಾತು ಕೇಳುತ್ತಾರೆ. ಹಾಗಾಗಿ ಕ್ಷೇತ್ರದ ಕೆಲಸಗಳು ನಡೆಯುತ್ತವೆ ಎಂದು ಸಿದ್ದರಾಮಯ್ಯ ಅವರು ಮತದಾರರಿಗೆ ಭರವಸೆ ನೀಡಿದರು.
ಬಾದಾಮಿ ಕ್ಷೇತ್ರ ಆಗಾಗ ಬರಗಾಲಕ್ಕೆ ತುತ್ತಾಗುವ ತಾಲೂಕು. ಹಾಗಾಗಿ ಬಾದಾಮಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಕಿಕೊಂಡಿದ್ದೇನೆ. ಈಗಾಗಲೇ ಕೆಲವೆಡೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬಾದಾಮಿ, ಗುಳೇದಗುಡ್ಡ, ಕೆರೂರ ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಕರೆಯುವ ಹಂತದಲ್ಲಿದೆ. ಇತ್ತೀಚಗೆ ಸಚಿವ ಸಂಪುಟದಲ್ಲಿ 35 ಕೋಟಿ ರೂ ರಸ್ತೆ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಬಾದಾಮಿಯಲ್ಲಿ ಎಲ್ಲಾ ಕೆಲಸ ಮಾಡಿ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು. 
ಕ್ಷೀರ ಭಾಗ್ಯ,ಶಾಲಾ ಮಕ್ಕಳಿಗೆ ಶೂ ಭಾಗ್ಯ,ಅನ್ನಭಾಗ್ಯ ನೀಡಿರುವ ಬಗ್ಗೆ ಆಕ್ಷೇಪಿಸಿದ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ಮೋದಿ ಅವರೇನು ತಮ್ಮ ಕೈಯಿಂದ ಹಣ ಖರ್ಚು ಮಾಡಿದ್ದಾರಾ?, ಮೋದಿ ಅವರು ಘೋಷಿಸಿರುವ ಕಾರ್ಯಕ್ರಮಕ್ಕೆ ಹಣ ಎಲ್ಲಿಂದ ಬಂತು? ಅದು ತೆರಿಗೆ ಹಣ. ಅವರು ಕರ್ನಾಟಕದಿಂದ ಬರುವ ತೆರಿಗೆ ಹಣದಿಂದಲೇ ನೀಡುವುದು ಎಂದು ಹೇಳಿದರು. 
ಶೂ ಭಾಗ್ಯಕ್ಕೆ ಜನ ಕೈಯಲ್ಲಿ ಶೂ ಹಿಡಿದುಕೊಂಡಿದ್ದರು ಎನ್ನುವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಈಶ್ವರಪ್ಪನ ಸಂಸ್ಕೃತಿಯೇ ಅಷ್ಟು. ಅವನೇ ಶೂ ಕೈಯಲ್ಲಿ ಹಿಡಿದುಕೊಳ್ಳುತ್ತಾನೋ ಗೊತ್ತಿಲ್ಲ. ಬಿಜೆಪಿಯವರು ತಮಗೆ ಸಂಸ್ಕೃತಿ ಇದೆ ಅನ್ನುತ್ತಾರೆ. ಅವರ ನಾಲಿಗೆಯಲ್ಲಿ ಸಂಸ್ಕೃತಿಯೇ ಇಲ್ಲ. ಈಶ್ವರಪ್ಪ ಸಂಸ್ಕೃತಿಯೇ ಇಲ್ಲದ ಮನುಷ್ಯ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬ್ರಿಟಿಷ್ ಸಂತತಿಯ ಸೆರಗು ಹಿಡಿದುಕೊಂಡು ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಮುಖ್ಯಮಂತ್ರಿ ಆಗಿ ಮುಗಿದಿದೆ. ಅವನಂತೂ ಮುಖ್ಯಮಂತ್ರಿ ಆಗುವುದಿಲ್ಲ. ಯಡಿಯೂರಪ್ಪ ಸಹ ಮುಖ್ಯಮಂತ್ರಿ ಆಗಲ್ಲ. ಅವರಿಬ್ಬರೂ ಕನಸು ಕಾಣುತ್ತಾ ಕುಳಿತುಕೊಳ್ಳಬೇಕಷ್ಟೆ. ನಾಗರೀಕತೆ, ಸಂಸ್ಕೃತಿ ಇಲ್ಲದವರು ಇಂಥ ಪದ ಬಳಸುತ್ತಾರೆ ಅವನು ಮನುಷ್ಯನೇ ಅಲ್ಲ ಎಂದು ಏಕವಚನದಲ್ಲಿ ಈಶ್ವರಪ್ಪ ವಿರುದ್ಧ ಹರಿಹಾಯ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com