22 ಸೀಟಿಗಾಗಿ 44ಯೋಧರ ಬಲಿ: ಇನ್ನೆರಡು ದಿನಗಳಲ್ಲಿ ಬಯಲಾಗಲಿದೆ ಬಿಜೆಪಿ ಏರ್ ಸ್ಟ್ರೈಕ್ ರಹಸ್ಯ; ಪ್ರಿಯಾಂಕ್ ಖರ್ಗೆ

44 ಯೋಧರ ಸಾವು, ಬಿಜೆಪಿಗೆ ಸೀಟು, ಇದು ಬಿಜಪಿ ಸ್ಯಾಟರ್ಜಿ, ವೈಮಾನಿಕ ದಾಳಿ ಹಿಂದೆ ಷಡ್ಯಂತ್ರವಿದ್ದು, ಆ ರಹಸ್ಯ ಇನ್ನೆರಡು ದಿನಗಳಲ್ಲಿ ...
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು/ ಮೈಸೂರು:  44 ಯೋಧರ ಸಾವು, ಬಿಜೆಪಿಗೆ ಸೀಟು, ಇದು ಬಿಜಪಿ ಸ್ಯಾಟರ್ಜಿ, ವೈಮಾನಿಕ ದಾಳಿ ಹಿಂದೆ ಷಡ್ಯಂತ್ರವಿದ್ದು, ಆ ರಹಸ್ಯ ಇನ್ನೆರಡು ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಚಾಮರಾಜನಗರದ ಬಿಳಿಗಿರಿ ರಂಗನ ಬೆಟ್ಟದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಹಾಗೂ ಯಡಿಯೂರಪ್ಪ ವಿರುದ್ಧ ತೀವ್ರವಾಗಿ ಹರಿಹಾಯ್ದರು, ವಾಯುಪಡೆ ದಾಳಿ ಬಗ್ಗೆ ಯಡಿಯೂರಪ್ಪ ಅವರ ಹೇಳಿಕೆಯನ್ನು ಗಮನಿಸಿದರೆ, ಇಡೀ ಬೆಳವಣಿಗೆ ಹಿಂದೆ ಷಡ್ಯಂತ್ರ ಇರುವ ಶಂಕೆ ಮೂಡುತ್ತಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಎಲ್ಲವೂ ಬಯಲಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 44 ಸೈನಿಕರನ್ನು ಬಲಿ ನೀಡುವ ಮೂಲಕ ಬಿಜೆಪಿ 22 ಸೀಟುಗಳನ್ನು ಗೆಲ್ಲಲು ಮುಂದಾಗಿದೆ. ಈ ಬಗ್ಗೆ ಯಡಿಯೂರಪ್ಪ ಅವರೇ ಹೇಳಿಕೆ ನೀಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಈ ಎರಡೂ ದೇಶಗಳಲ್ಲಿ ಯುದ್ಧೋನ್ಮಾದ ಸ್ಥಿತಿ ಉಂಟಾಗಿದ್ದರೂ ರಕ್ಷಣಾ ಸಚಿವರು ಎಲ್ಲಿ ಹೋಗಿದ್ದಾರೆ? ಇಷ್ಟೆಲ್ಲಾ ನಡೆಯುತ್ತಿದ್ದರೂ ಅವರೇಕೆ ಹೊರಗೆ ಬಂದಿಲ್ಲ ಎಂದು ಪ್ರಶ್ನಿಸಿದರು.
ಇದೇ ವೇಳೆ. ಭಾರತೀಯ ವಾಯುಪಡೆಯ ವೈಮಾನಿಕ ದಾಳಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ದೇಶದ ಯೋಧರ ತ್ಯಾಗವನ್ನು ಕಮಲ ಪಕ್ಷ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿಜ ಮಲ್ಲಿಕಾರ್ಜುನ ಖರ್ಗೆ, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶ್ಲಾಘಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ವೈಮಾನಿಕ ದಾಳಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸೀಟುಗಳನ್ನು ಪಡೆಯುತ್ತದೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಅತ್ತ ಚನ್ನೈನಲ್ಲಿ ಪ್ರಧಾನಿ ಒಂದು ಹೇಳಿಕೆ ನೀಡುತ್ತಾರೆ. ಇದು ನಾಚಿಕೆಗೇಡು ಎಂದು ಹರಿಹಾಯ್ದರು.
ಬಿಜೆಪಿ ಇಂತಹ ಟ್ರಿಕ್ಸ್ ಗಳಿಂದ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಮುಂದಾಗಿದೆ. ಮತ್ತೊಬ್ಬರ ಹೆಣದ ಮೇಲೆ ರಾಜಕೀಯ ಮಾಡಿಕೊಳ್ಳಲು ಬಿಜೆಪಿ ಲೆಕ್ಕಾಚಾರ ಮಾಡುತ್ತಿದೆ. ಸೈನಿಕರು ದೇಶದ ಹೆಮ್ಮೆ. ಇಂತಹ ಯೋಧರ ತ್ಯಾಗವನ್ನು ಪಕ್ಷ ಅಧಿಕಾರಕ್ಕೆ ತರಲು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ದುರಂತ. 
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಪಕ್ಷದ ನಾಯಕರು ಈ ರೀತಿ ಹೇಳಿಕೆಗಳನ್ನು ನೀಡುವುದು ಶೋಭೆ ತರುವಂತಹದಲ್ಲ. ದೇಶದ ರಕ್ಷಣೆ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com