ನಾನು ಕೇವಲ ಪಾತ್ರಧಾರಿ, ದೇವೇಗೌಡರ ಕುಟುಂಬವೇ ಸೂತ್ರಧಾರಿ: ಮಂಡ್ಯ ಸಂಸದ ಶಿವರಾಮೇಗೌಡ

ನಾನು ದೇವೇಗೌಡರ ಕುಟುಂಬದ ಸಕ್ರಿಯ ಸದಸ್ಯ. ನಾನು ಕೇವಲ ಒಬ್ಬ ನಟನಾಗಿದ್ದು, ಸಂಸದನ ಪಾತ್ರ ನಿರ್ವಹಿಸಿದ್ದೇನೆ. ಮುಂದೆ ಯಾವ ಪಾತ್ರ ಕೊಟ್ಟರೂ....
ಎಲ್ ಆರ್ ಶಿವರಾಮೇಗೌಡ
ಎಲ್ ಆರ್ ಶಿವರಾಮೇಗೌಡ
ಬೆಂಗಳೂರು: ನಾನು ದೇವೇಗೌಡರ ಕುಟುಂಬದ ಸಕ್ರಿಯ ಸದಸ್ಯ. ನಾನು ಕೇವಲ ಒಬ್ಬ ನಟನಾಗಿದ್ದು, ಸಂಸದನ ಪಾತ್ರ ನಿರ್ವಹಿಸಿದ್ದೇನೆ. ಮುಂದೆ ಯಾವ ಪಾತ್ರ ಕೊಟ್ಟರೂ ಅದನ್ನು ನಿರ್ವಹಿಸುತ್ತೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರಿನ ಬಾಗಿಲು ತೆಗೆದು ಹಾಕುವ ಕೆಲಸಕ್ಕೂ ತಾವು ಸಿದ್ಧ ಮಂಡ್ಯ ಸಂಸದ ಎಲ್ ಆರ್ ಶಿವರಾಮೇಗೌಡ ಅವರು ಸೋಮವಾರ ಹೇಳಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ಮುಂದಾಗಿದ್ದು, ಇಂದು ಖಾಸಗಿ ಹೊಟೇಲ್‍ ನಲ್ಲಿ ಶಿವರಾಮೆಗೌಡ ಸೇರಿದಂತೆ ಕೆಲ ಅಸಮಾಧಾನಿತ ಮೈತ್ರಿ ಪಕ್ಷದ ನಾಯಕರ ಜೊತೆ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ. ಹಿಂದೆ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಅಶ್ವತ್ಥ ನಾರಾಯಣ, ಸಿ.ಪಿ.ಯೋಗೇಶ್ವರ್ ಅವರೇ ಇದರ ನೇತೃತ್ವ ವಹಿಸಿರುವುದು ಗಮನಾರ್ಹ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮೇಗೌಡ ಅವರು, ತಮ್ಮನ್ನು ಯಾರೂ ಸಹ ಖರೀದಿಸಲು ಸಾಧ್ಯವಿಲ್ಲ.  ಊಟಕ್ಕಾಗಿ ಸೇರಿದ್ದ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರ ಭೇಟಿಯಾಗಿದೆ. ಪರಸ್ಪರ ಕುಶಲೋಪಚರಿ ವಿಚಾರಿಸಿದ್ದೇವೆಯೇ ಹೊರತು ರಾಜಕೀಯ ಚರ್ಚೆ ನಡೆಸಿಲ್ಲ ಎನ್ನುವ ಮೂಲಕ ಬಿಜೆಪಿ ನಾಯಕರ ಭೇಟಿಯನ್ನು ಅವರು ಸೂಕ್ಷ್ಮವಾಗಿ ತಳ್ಳಿಹಾಕಿದರು.
ಭಾನುವಾರವಷ್ಟೇ ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದ್ದು, ಕ್ಷೇತ್ರದಿಂದ ಯಾರು ನಾಮಪತ್ರ ಸಲ್ಲಿಸಬೇಕು ಎನ್ನುವುದಿನ್ನೂ ಅಂತಿಮವಾಗಬೇಕು. ತಾವು ಈವರೆಗೂ ಬಹಳಷ್ಟು ಚುನಾವಣೆಗಳನ್ನು ಎದುರಿಸಿದ್ದು, ನಿಖಿಲ್ ಅವರ ಸ್ಪರ್ಧೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ನಿಖಿಲ್ ಅವರು ಗೆಲ್ಲುತ್ತಾರೆ ಎಂದು ಮಾರ್ಮಿಕವಾಗಿ ತಿಳಿಸಿದರು.
ಸುಮಲತಾ ಅಂಬರೀಷ್ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಮಲತಾ ಅವರು ತಮ್ಮ ಸ್ನೇಹಿತ ಅಂಬರೀಷ್ ಅವರ ಪತ್ನಿ. ಚುನಾವಣೆಗೆ ಸ್ಪರ್ಧಿಸಬೇಕೇ ಬೇಡವೇ ಎನ್ನುವುದು ಅವರ ವೈಯಕ್ತಿಕ ವಿಚಾರ ಎಂದರು.
ದೇವೇಗೌಡರ ಕುಟುಂಬ ರಾಜಕಾರಣದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಎಲ್ಲಾ ಪಕ್ಷಗಳಲ್ಲಿಯೂ ಕುಟುಂಬ ರಾಜಕಾರಣವಿದೆ. ಎಲ್ಲರ ಮನೆಯಲ್ಲಿಯೂ ಕುಟುಂಬ ರಾಜಕಾರಣವಿದೆ. ಕಾಂಗ್ರೆಸ್ ಸ್ನೇಹಿತರು ಕಳೆದ ಉಪಚುನಾವಣೆಯಲ್ಲಿ ತಮಗೆ ಬೆಂಬಲ ನೀಡಿದ್ದಾರೆ. ಜೆಡಿಎಸ್‍ನವರು ಕಾಂಗ್ರೆಸ್ ಪಕ್ಷದವರ ಹಿಂದೆ ಹೋಗಬೇಕಾದ ಅನಿವಾರ್ಯತೆಯಿಲ್ಲ. ಮೈತ್ರಿ ಧರ್ಮ ಪಾಲನೆಯಾಗಬೇಕು ಎನ್ನುವುದಿದ್ದರೆ ಕಾಂಗ್ರೆಸಿನವರೇ ಜೆಡಿಎಸ್ ಜತೆಗೆ ಕೈ ಜೋಡಿಸುತ್ತಾರೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಅಲುಗಾಡಲು ಸಾಧ್ಯವಿಲ್ಲ ಎಂದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ, ಸುಮಲತಾ ವಿರುದ್ಧ ಸಚಿವ ರೇವಣ್ಣ ಅವರ ಹೇಳಿಕೆಯನ್ನು ವಿರೋಧಿಸಿದರು. ಜೆಪಿಯಲ್ಲೂ ತಮಗೆ ಸ್ನೇಹಿತರಿದ್ದಾರೆ. ಇಲ್ಲಿ ಬಿಜೆಪಿ ನಾಯಕರ ಭೇಟಿ ಆಕಸ್ಮಿಕ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ತಾವು ಯಾರಿಗೂ ವೈರಿಯಲ್ಲ ಎಂದರು.
ಬಿಜೆಪಿ ಮುಖಂಡ ರಾಜುಗೌಡ ಮಾತನಾಡಿ, ಮಂಡ್ಯ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ನಾಯಕರು ಬಿಜೆಪಿ ನಾಯಕರ ಜೊತೆ ಸಹಜ ಮಾತುಕತೆ ನಡೆಸಿದ್ದಾರೆ. ಇದರಲ್ಲಿ ಯಾವುದೇ ವಿಶೇಷತೆಯಿಲ್ಲ. ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಮಾಜಿ ಮುಖ್ಯಮಂತ್ರಿ ಎಸ್‍.ಎಂ.ಕೃಷ್ಣ ಅವರನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಭೇಟಿ ನಡೆಸಿದ್ದಾರೆ. ಸುಮಲತಾ ಅವರನ್ನು ಬಿಜೆಪಿ ಬೆಂಬಲಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳಿವೆ ಎಂದರು.
ಇದಕ್ಕೆ ವ್ಯತಿರಿಕ್ತವಾಗಿ ಮಾತನಾಡಿರುವ ಮಾಜಿ ಉಪಸಭಾಪತಿ ಪುಟ್ಟಣ್ಣ ಅವರು,   ಬಿಜೆಪಿ ನಾಯಕರ ಭೇಟಿ ಆಕಸ್ಮಿಕವಾದರೂ, ಭೇಟಿಯಲ್ಲಿ ರಾಜಕೀಯ ಚರ್ಚೆ ನಡೆಸಿರುವುದಾಗಿ ಸ್ಪಷ್ಟಪಡಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒಂದೆಡೆ ಸ್ವಪಕ್ಷೀಯ ನಾಯಕರಿಂದಲೇ ಅಸಮಾಧಾನ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ತೋರುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದರೆ, ಇತ್ತ ಮಂಡ್ಯ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಲೇ ಇದೆ.
ಇಂದು  ಜಿಲ್ಲೆಯ ಕಾಂಗ್ರೆಸ್, ಜೆಡಿಎಸ್ ನಾಯಕರು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ನಗರದ ಖಾಸಗಿ ಹೊಟೇಲ್‍ನಲ್ಲಿ ಮಂಡ್ಯ ಜೆಡಿಎಸ್ ಸಂಸದ ಶಿವರಾಮೇಗೌಡ, ಕಾಂಗ್ರೆಸ್ ನಾಯಕರಾದ ಚೆಲುವರಾಯಸ್ವಾಮಿ, ಬಾಲಕೃಷ್ಣ ಸೇರಿದಂತೆ ಹಲವರು ಬಿಜೆಪಿ ಮಾಜಿ ಶಾಸಕರಾದ ಅಶ್ವತ್ಥ ನಾರಾಯಣ ಮತ್ತು ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿ ಮಾಡಿ ಮಂಡ್ಯ ರಾಜಕೀಯ ಕುರಿತು ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಹಾಲಿ ಸಂಸದ ಶಿವರಾಮೇಗೌಡ ಸಹ ಜೆಡಿಎಸ್‍ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ನಿಖಿಲ್ ಸ್ಪರ್ಧೆಯಿಂದ ಶಿವರಾಮೇಗೌಡ ಅವರಿಗೆ ನಿರಾಸೆಯಾಗಿದೆ. ಜೆಡಿಎಸ್‍ನಿಂದ ಅಸಮಾಧಾನಗೊಂಡು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ ಸೇರ್ಪಡೆಗೊಂಡಿದ್ದ ಚೆಲುವರಾಯಸ್ವಾಮಿ, ಬಾಲಕೃಷ್ಣ ಅವರಿಗೂ ಪಕ್ಷದ ನಡೆ ನುಂಗಲಾರದ ತುತ್ತಾಗಿದೆ.
ಒಂದು ಕಡೆ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರೆಲ್ಲರಿಗೂ ಟಿಕೆಟ್ ತಪ್ಪಿತ್ತು. ಜೆಡಿಎಸ್‍ನಿಂದ ಮುನಿಸಿಕೊಂಡು ಕಾಂಗ್ರೆಸ್‍ಗೆ ಬಂದಿರುವ ಇವರಿಗೆ ನಿಖಿಲ್ ಸ್ಪರ್ಧಿಸುತ್ತಿರುವುದು ಇಷ್ಟವಿಲ್ಲ. 
ಮಂಡ್ಯದಲ್ಲಿ ಸುಮಲತಾ ಅಂಬರೀಷ್​ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲು ಕಾಂಗ್ರೆಸ್​ ಮುಂದಾಗಿತ್ತು. ಆದರೆ, ಅಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲು ಜೆಡಿಎಸ್,​ ನಿಖಿಲ್ ಕುಮಾರಸ್ವಾಮಿಯವರ ರಾಜಕೀಯ ಪ್ರವೇಶಕ್ಕೆ ಮಂಡ್ಯವನ್ನೇ ವೇದಿಕೆಯನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿತ್ತು. 
ಅದರೆ ನಿಖಿಲ್ ಸ್ಪರ್ಧೆ ಮೈತ್ರಿ ಪಕ್ಷಗಳ ನಡುವಿನ ಅಸಮಾಧಾನ ಬಹಿರಂಗವಾಗಿ ಹೊರಬಿದ್ದಿತ್ತು. ಮಂಡ್ಯದ ಅಂಬರೀಷ್​ ಮತ್ತು ಕಾಂಗ್ರೆಸ್​ ಅಭಿಮಾನಿಗಳು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದರು.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸುತ್ತಿರುವುದರಿಂದ ಕಾಂಗ್ರೆಸ್ ಸಹಜವಾಗಿಯೇ ಬೆಂಬಲ ನೀಡಬೇಕು. ಆದರೆ ಇದಕ್ಕೆ ಮಂಡ್ಯದ ಕಾಂಗ್ರೆಸ್ ನಾಯಕರು ಸಿದ್ಧರಿಲ್ಲ. 
ಮಂಡ್ಯದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರ ವಿರೋಧವನ್ನು ಸರಿಪಡಿಸುವಂತೆ ಜೆಡಿಎಸ್ ವರಿಷ್ಠರ ಸೂಚನೆ ಮೇರೆಗೆ ಸಚಿವ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರೂ ಅದು ಸಫಲವಾಗಲಿಲ್ಲ. ಜೆಡಿಎಸ್‍ಗೆ ಆಪ್ತರಾಗಿರುವ ಡಿ.ಕೆ.ಶಿವಕುಮಾರ್ ಸ್ವಯಂಪ್ರೇರಿತರಾಗಿ ಮಂಡ್ಯ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದರು. ಪಕ್ಷದ ವರಿಷ್ಠರ ಸೂಚನೆ ಇಲ್ಲದೇ ಮಂಡ್ಯ ನಾಯಕರ ಸಭೆ ಕರೆದಿದ್ದನ್ನು ವಿರೋಧಿಸಿ ಚೆಲುವರಾಯಸ್ವಾಮಿ, ಬಾಲಕೃಷ್ಣ ಸೇರಿದಂತೆ ಹಲವರು ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ದೂರು ನೀಡಿದ್ದಾರೆ.
ಒಂದು ಕಡೆ ಜೆಡಿಎಸ್‍ಗೆ ಬೆಂಬಲಿಸುವ ಮನಸ್ಸೂ ಇಲ್ಲ. ಮತ್ತೊಂದೆಡೆ ಪಕ್ಷದಿಂದ ಅಭ್ಯರ್ಥಿಯೂ ಇಲ್ಲ. ಹೀಗಾಗಿ ತ್ರಿಶಂಕು ಸ್ಥಿತಿಯಲ್ಲಿ ಮಂಡ್ಯ ಸ್ಥಳೀಯ ಕಾಂಗ್ರೆಸ್ ನಾಯಕರಿದ್ದಾರೆ. 
ಒಟ್ಟಾರೆ ಮಂಡ್ಯ ಮೂಲಕ ಪಕ್ಷದ ವರ್ಚಸನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಜೆಡಿಎಸ್ ವರಿಷ್ಠರಿಗೆ ನಿಖಿಲ್ ಸ್ಪರ್ಧೆ ಬಿಕ್ಕಟ್ಟು ತಂದೊಡ್ಡಿದೆ. ಸ್ವಪಕ್ಷದ ನಾಯಕರು, ಮೈತ್ರಿ ಪಕ್ಷದ ನಾಯಕರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿರುವುದು ಮಂಡ್ಯದ ಮುಂದಿನ ರಾಜಕೀಯ ಬೆಳವಣಿಗೆಗಳು ಯಾವ ತಿರುವು ಪಡೆಯಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com