ಸಿದ್ದರಾಮಯ್ಯ ಸೋಲು ನನಗೆ ಗೆಲುವಿನ ವಿಶ್ವಾಸ ಹೆಚ್ಚಿಸಿದೆ: ಶ್ರೀನಿವಾಸ್ ಪ್ರಸಾದ್

ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್ ಅವರು ಚಾಮರಾಜನಗರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದು....
ಶ್ರೀನಿವಾಸ್ ಪ್ರಸಾದ್
ಶ್ರೀನಿವಾಸ್ ಪ್ರಸಾದ್
ಮೈಸೂರು: ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್ ಅವರು ಚಾಮರಾಜನಗರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದು, ಈ ಮೂಲಕ ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಚುನಾವಣಾ ರಾಜಕೀಯದಿಂದ ದೂರವಿದ್ದೇನೆ. ಆದರೀಗ ಕಾರ್ಯಕರ್ತರು ಹಾಗೂ ಬೆಂಬಲಿಗರ ಒತ್ತಡದಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಮತದಾರರು ತಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
ಶ್ರೀನಿವಾಸ್‍ ಪ್ರಸಾದ್‍ ಅವರು ಐದು ಬಾರಿ ಲೋಕಸಭೆಗೆ ಹಾಗೂ ಎರಡು ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿರುವ ಹಿರಿಯ ರಾಜಕಾರಣಿಯಾಗಿದ್ದಾರೆ. 
ದೇಶದ ಉದ್ದಗಲಕ್ಕೂ ಪ್ರಧಾನಮಂತ್ರಿ ನರೇಂದ್ರಮೋದಿ ಪರ ಅಲೆ ಇದೆ ಎಂದು ಪ್ರತಿಪಾದಿಸಿರುವ ಶ್ರೀನಿವಾಸ ಪ್ರಸಾದ್‍ ಅವರು, ಕಾಂಗ್ರೆಸ್‍ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಮೊದಲ ಬಾರಿಗೆ ಅತಿ ಹಳೆಯ ಪಕ್ಷವೆನಿಸಿದ ಕಾಂಗ್ರೆಸ್ ಸಣ್ಣ-ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ. ಇದು ಕಾಂಗ್ರೆಸ್‍ನ ಶಕ್ತಿಯನ್ನು ತೋರಿಸುತ್ತದೆ. 
2014ರಲ್ಲಿ ಗೆದ್ದಿರುವ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಕಾಂಗ್ರೆಸ್‍ ಸಣ್ಣ ಪಕ್ಷಗಳೊಂದಿಗೆ ಮೈತ್ರಿಮಾಡಿಕೊಳ್ಳುತ್ತಿದೆ ಎಂದು ಲೇವಡಿ ಮಾಡಿದ್ದಾರೆ. 
ಚಾಮರಾಜನಗರದಿಂದ ಮತ್ತೆ ಸ್ಪರ್ಧಿಸುವ ಕುರಿತು ಕೇಳಲಾದ ಪ್ರಶ್ನೆಗೆ ಅವರು, ಕ್ಷೇತ್ರದ ಜನರು ದೀರ್ಘಕಾಲದಿಂದ ತಮ್ಮೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದರು. 
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀನಿವಾಸ್ ಪ್ರಸಾದ್ ಅವರು, ಸಿದ್ದರಾಮಯ್ಯ ಅವರು ನನ್ನನ್ನು ಅವಮಾನಿಸಿದ ಕಾರಣ ನಾನು ಮತ್ತೆ ಚುನಾವಣೆಗೆ ನಿಲ್ಲುತ್ತಿದ್ದೇನೆ. ಸಿದ್ದರಾಮಯ್ಯ ಅವರು ಯಾವುದೇ ಕಾರಣ ನೀಡದೆ ತಮ್ಮನ್ನು ಸಚಿವ ಸಂಪುಟದಿಂದ ತೆಗೆದು ಹಾಕಿದ್ದರು ಎಂದು ಆರೋಪಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದೇನೆ. ಸಿದ್ದರಾಮಯ್ಯ ಸೇರಿದಂತೆ ಸ್ಥಳೀಯ ಕಾಂಗ್ರೆಸ್‍ ಮುಖಂಡರಿಗೆ ಮತದಾರರು ಪಾಠ ಕಲಿಸಿದ್ದಾರೆ. ಸಿದ್ದರಾಮಯ್ಯ ಸೋಲು ನನಗೆ ಗೆಲುವಿನ ವಿಶ್ವಾಸ ತಂದಿದೆ ಎಂದರು.
ಶ್ರೀನಿವಾಸ್‍ ಪ್ರಸಾದ್‍ ಅವರು, ಮಾರ್ಚ್ 26ಕ್ಕೂ ಮುನ್ನ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com