ಲೋಕಸಭೆ ಚುನಾವಣೆ: ಬೆಂಗಳೂರು ಉತ್ತರದಿಂದ ಬಿಎಲ್ ಶಂಕರ್ ಮೈತ್ರಿ ಅಭ್ಯರ್ಥಿ?

ಮೈತ್ರಿ ಪಕ್ಷಗಳ ಸೀಟು ಹಂಚಿಕೆಯಲ್ಲಿ ಜೆಡಿಎಸ್ ಗೆ ದೊರೆತಿರುವ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡುವ ಸಾದ್ಯತೆ ಇದೆ.
ಬಿಎಲ್ ಶಂಕರ್
ಬಿಎಲ್ ಶಂಕರ್
ಬೆಂಗಳೂರು: ಮೈತ್ರಿ ಪಕ್ಷಗಳ ಸೀಟು ಹಂಚಿಕೆಯಲ್ಲಿ ಜೆಡಿಎಸ್ ಗೆ ದೊರೆತಿರುವ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡುವ ಸಾದ್ಯತೆ ಇದೆ.
ತುಮಕೂರು ಹಾಗೂ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುವ ಸಾಧ್ಯತೆಗಳು ಕ್ಷೀಣಿಸಿದ್ದು, ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಎಲ್ ಶಂಕರ್ ಮೈತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಈ ಸಂಬಂಧ ಇಂದು ಇಡೀ ದಿನ ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ತುಮಕೂರು ಜಿಲ್ಲಾ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಸಭೆ ಸೇರಿ ದೇವೇಗೌಡರು ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ಮತ್ತೊಂದೆಡೆ ಚುನಾವಣೆಗೆ ಸ್ಪರ್ಧಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿ ದೇವೇಗೌಡರಿದ್ದಾರೆ. ಅನಿವಾರ್ಯ ಪರಿಸ್ಥಿತಿ ಎದುರಾದಲ್ಲಿ ಹಾಸನದಿಂದಲೇ ಸ್ಪರ್ಧಿಸುವ ಲೆಕ್ಕಚಾರವನ್ನು ಗೌಡರು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ತುಮಕೂರು ಕ್ಷೇತ್ರವನ್ನು ಉಳಿಸಿಕೊಂಡು ಬೆಂಗಳೂರು ಉತ್ತರ  ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವ ಚಿಂತನೆ ಜೆಡಿಎಸ್ ಪಕ್ಷದ್ದಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ಬಿ.ಎಲ್.ಶಂಕರ್, ಸಚಿವ ಕೃಷ್ಣ ಬೈರೇಗೌಡ ಅವರ ಪೈಕಿ ಒಬ್ಬರನ್ನು ಅಖಾಡಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ. ಅಂತೆಯೇ ತುಮಕೂರು ಕ್ಷೇತ್ರದಿಂದ ಮುದ್ದಹನುಮೇಗೌಡರನ್ನು ಜೆಡಿಎಸ್ ಪಕ್ಷ ಸೆಳೆದುಕೊಂಡು ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವ ಲೆಕ್ಕಾಚಾರವೂ ಇದೆ ಎನ್ನಲಾಗಿದೆ
ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭ್ಯರ್ಥಿ ಕೊರತೆಯನ್ನು ಎದುರಿಸುತ್ತಿರುವ ಜೆಡಿಎಸ್ ಗೆ ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ ಗೆ ಜೆಡಿಎಸ್ ಟಿಕೆಟ್ ಕೊಟ್ಟು ಕಣಕ್ಕಿಳಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂತೆಯೇ ಉತ್ತರ ಕನ್ನಡದಲ್ಲಿ ಅಭ್ಯರ್ಥಿ ಕೊರತೆಯಿದ್ದು, ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಡಬೇಕು ಎಂದು ಆರ್.ವಿ.ದೇಶಪಾಂಡೆ ದೇವೇಗೌಡರ ಬಳಿ ಮನವಿ ಮಾಡಿದ್ದು ತಮ್ಮ ಪುತ್ರನನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಬೆಂಗಳೂರು ಉತ್ತರ ಕ್ಷೇತ್ರ ಸೇರಿದಂತೆ ತುಮಕೂರು, ಚಿಕ್ಕಮಗಳೂರು, ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರತಿಪಕ್ಷ ಬಿಜೆಪಿ ತೀವ್ರ ಸ್ಪರ್ಧೆ ಒಡ್ಡುವ ಪ್ರಬಲ ಅಭ್ಯರ್ಥಿಗಳ ಕೊರೆತೆಯಿದೆ.
ಬೆಂಗಳೂರು ಉತ್ತರ ಹಾಗೂ ತುಮಕೂರು ಕ್ಷೇತ್ರ ಸ್ಪರ್ಧೆ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ನಿವಾಸದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರ ಜೊತೆ ಮಾಜಿ ಪ್ರಧಾನಿ ದೇವೇಗೌಡರು ಚರ್ಚೆ ನಡೆಸುತ್ತಿದ್ದು, ಬಳಿಕ ಸ್ಪಷ್ಟ ನಿರ್ಧಾರ ಹೊರಬೀಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com