ಯಡಿಯೂರಪ್ಪ ಡೈರಿ ಪ್ರಕರಣ: ಕಾಂಗ್ರೆಸ್ ನಾಯಕರಿಗೆ ಬಿಜೆಪಿಯ 10 ಪ್ರಶ್ನೆಗಳು!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‍.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಕ್ಷದ ಕೇಂದ್ರ ನಾಯಕತ್ವಕ್ಕೆ 1,800 ಕೋಟಿ ರೂ. ಪಾವತಿ ಮಾಡಿದ್ದಾರೆ ...
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ
Updated on
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‍.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಕ್ಷದ ಕೇಂದ್ರ ನಾಯಕತ್ವಕ್ಕೆ 1,800 ಕೋಟಿ ರೂ. ಪಾವತಿ ಮಾಡಿದ್ದಾರೆ ಎಂಬ ಆರೋಪ ಇರುವ ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‍ ನಾಯಕರಿಗೆ ಬಿಜೆಪಿ 10 ಪ್ರಶ್ನೆಗಳನ್ನು ಕೇಳಿದೆ,
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 
ಈ ಡೈರಿ ನಿಮಗೆ ಸಿಕ್ಕಿದ್ದು ಯಾವಾಗ ? ಯಾರು ಈ ಡೈರಿಯನ್ನು ತಂದುಕೊಟ್ಟರು ?, ಎಲ್ಲಿ ಕೊಟ್ಟರು, ಮೂಲ ಡೈರಿ ಎಲ್ಲಿದೆ ? ಯಾಕೆ ಇದುವರೆಗೆ ಈ ಡೈರಿ ಆಧರಿಸಿ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ನೀಡಿಲ್ಲ ? 2013ರ ಮೇ ತಿಂಗಳಿಂದ ನಿಮ್ಮದೇ ಪಕ್ಷದ ಆಡಳಿತ ಇದ್ದರೂ ಯಾವುದೇ ತನಿಖೆ ನಡೆಸದೆ ಇರಲು ಕಾರಣವೇನು ? ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಅವರದ್ದು ಎಂದು ಹೇಳಲಾದ ಡೈರಿಯು ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ?, ಇದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕು. ಈ ಹಿಂದೆ ಪ್ರಕರಣವೊಂದರ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಕಾಂಗ್ರೆಸ್‍ ಮುಖಂಡರು, ಈಗ ಯಾವುದೇ ದೂರು ನೀಡದೇ ಇರಲು ಕಾರಣವೇನು?, ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರ ಮನೆಯಲ್ಲಿ  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಕಾಂಗ್ರೆಸ್ಸಿನ ಯಾವ ಯಾವ ನಾಯಕರಿಗೆ ಹಣ ಸಂದಾಯವಾಗಿದೆ ಎನ್ನುವುದು ನಮೂದಾಗಿತ್ತು. ಆಗ ಕಾಂಗ್ರೆಸ್ ಮುಖಂಡರು ಮುಜುಗರಕ್ಕೆ ಸಿಕ್ಕಿದ್ದಾಗಲೇ ಯಡಿಯೂರಪ್ಪ ಅವರ ಡೈರಿ ಕಾಂಗ್ರೆಸ್‍ ಪ್ರಾಯೋಜಕತ್ವದಲ್ಲಿ ಸೃಷ್ಟಿಯಾಗಿದ್ದು ನಿಜವಲ್ಲವೇ ?, ಬಿಜೆಪಿ ನಾಯಕರದ್ದೆನ್ನಲಾದ ಡೈರಿ ಪ್ರಕರಣವು ಲೋಕಪಾಲ ತನಿಖೆ ನಡೆಸಲು ಯೋಗ್ಯವಾಗಿದೆ ಎಂದು ಕಾಂಗ್ರೆಸ್  ಹೇಳಿದ್ದಾರೆ. ಆದರೆ ಆರೋಪ ಮಾಡಿದವರು ದೂರು ನೀಡಬೇಕೇ ಅಥವಾ ದೂರಿಗೆ ಒಳಗಾದವರೇ ? ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಡೈರಿ ಬರೆಯುವ ಯಾರು ಕೂಡ ಪ್ರತಿ ಪುಟಗಳಲ್ಲೂ ಸಹಿ ಮಾಡುವುದಿಲ್ಲ. ಒಂದು ವೇಳೆ ಡೈರಿ ಬರೆಯುವವರು ಯಾರಿಗೆ ಕೊಟ್ಟಿದ್ದೇವೆ ಎಂದು ಮಾತ್ರ ಬರೆಯುವುದಿಲ್ಲ, ಯಾರಿಂದ ಬಂದಿದೆ ಎನ್ನುವುದನ್ನೂ ನಮೂದಿಸುತ್ತಾರೆ. ಆದರೆ, ಕಾಂಗ್ರೆಸ್‍ ಪ್ರಕಟಿಸಿರುವ ಡೈರಿಯಲ್ಲಿ ಇದಾವುದೂ ಇಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಇಷ್ಟಕ್ಕೂ 2010ರ ಪೂರ್ವದಲ್ಲಿ ಯಡಿಯೂರಪ್ಪನವರು ತಮ್ಮ ಸಹಿಯನ್ನು ಸಂಖ್ಯಾಶಾಸ್ತ್ರದ ಪ್ರಕಾರ ಯಡ್ಯೂರಪ್ಪ ಎಂದು ಸಹಿ ಮಾಡುತ್ತಿದ್ದರು. ಇದನ್ನು ಗಮನಿಸಿದಾಗ ಬಿಜೆಪಿ ಮತ್ತು ಬಿ.ಎಸ್.ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರಲು ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್‍ ನಾಯಕರು ರೂಪಿಸಿರುವ ಸಂಚು ಇದು ಎಂದು ಅರ್ಥವಾಗುತ್ತದೆ ಎಂದು ಅವರು ತಿರುಗೇಟು ನೀಡಿದ್ದಾರೆ.
ದೇಶದ ಚೌಕಿದಾರರ ಪರವಾಗಿ ವ್ಯಕ್ತವಾಗುತ್ತಿರುವ ಜನಬೆಂಬಲದಿಂದ ಹತಾಶರಾಗಿರುವ ಕಾಂಗ್ರೆಸ್‍ ಪಕ್ಷದ ಚೋರರು ಮಾಡುತ್ತಿರುವ ಹತಾಶ ಪ್ರಯತ್ನ ಇದು ಎನ್ನುವುದು ದೇಶದ ಜನರಿಗೆ ಗೊತ್ತಿದೆ. ಈ ಚುನಾವಣೆಯು ಚೌಕಿದಾರ ಮತ್ತು ಚೋರರ ನಡುವಿನ ಚುನಾವಣೆ ಎನ್ನುವುದು ಸ್ಪಷ್ಟವಾಗಿದೆ. ಚೌಕಿದಾರ ಎಚ್ಚರವಾಗಿದ್ದಾನೆ. ದೇಶದ ಮತದಾರರು ಕೂಡ ಚೌಕಿದಾರರಂತೆ ಎಚ್ಚರವಾಗಿದ್ದಾರೆ. ಕಾಂಗ್ರೆಸ್ ನವರ ನಕಲಿ ಆಟ ನಡೆಯುವುದಿಲ್ಲ. ದಿನನಿತ್ಯ ಹಗರಣ ನಡೆಸಿ ಆಕಾಶ, ಭೂಮಿ, ಪಾತಾಳದಲ್ಲಿ ತಮ್ಮ ಹಗರಣಗಳ ಪರಾಕ್ರಮ ತೋರಿಸಿರುವ ಚೋರರಿಗೆ ರಾಜಕೀಯ ಭವಿಷ್ಯವಿಲ್ಲ. ಚೌಕಿದಾರ ಎಚ್ಚರವಾಗಿದ್ದಾನೆ ಎಂದು ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com