ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್

ದೇಶ ಉಳಿದರೆ ಧರ್ಮ ಉಳಿಯಲಿದೆ: ಸಚಿವ ಎಂಬಿ ಪಾಟೀಲ್ ಗೆ ಯತ್ನಾಳ್ ಟಾಂಗ್

ದೇಶ ಉಳಿದರೆ ಲಿಂಗಾಯತ ಧರ್ಮ ಉಳಿಯುತ್ತದೆ, ಜಾತಿ ಉಳಿಯುತ್ತದೆ. ಭಾರತ ಉಳಿಯಲಿಲ್ಲ ಎಂದರೆ ಯಾವ ಲಿಂಗಾಯತರು ಉಳಿಯುವುದಿಲ್ಲ...
ವಿಜಯಪುರ: ದೇಶ ಉಳಿದರೆ ಲಿಂಗಾಯತ ಧರ್ಮ ಉಳಿಯುತ್ತದೆ, ಜಾತಿ ಉಳಿಯುತ್ತದೆ. ಭಾರತ ಉಳಿಯಲಿಲ್ಲ ಎಂದರೆ ಯಾವ ಲಿಂಗಾಯತರು ಉಳಿಯುವುದಿಲ್ಲ ಎಂದು ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವವರನ್ನು ಬಿಜೆಪಿ ಶಾಸಕ, ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಉಳಿದರೆ ಮಾತ್ರ ಧರ್ಮ ಉಳಿಯುವುದು. ಜಾತಿ, ಮತ ಪಂಥಗಳು ಉಳಿಯಲಿವೆ. ದೇಶವೇ ಉಳಿಯಲಿಲ್ಲ ಎಂದರೆ ಯಾವ ಲಿಂಗಾಯತರು ಉಳಿಯುವುದಿಲ್ಲ. ಜಾತಿ ಜಾತಿ ಧರ್ಮ ಧರ್ಮಗಳ ನಡುವೆ ಯಾವುದೇ ಒಡಕು ಉಂಟು ಮಾಡದೇ ಎಲ್ಲರೂ ದೇಶ ರಕ್ಷಣೆ ಮಾಡಬೇಕು ಎಂದು ಪರೋಕ್ಷವಾಗಿ ಗೃಹ ಸಚಿವರ ಪ್ರತ್ಯೇಕ ಧರ್ಮ ವಿಚಾರಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರಿಗೆ ರಾಜಕೀಯ ಭವಿಷ್ಯವಿಲ್ಲ. ಕೆಲವು ದಿನಗಳಲ್ಲಿ ಸಿದ್ದರಾಮಯ್ಯ ಅವರು ಮೂಲೆ ಗುಂಪು ಆಗಲಿದ್ದಾರೆ. ಮೇ 23 ರ ನಂತರ ಮೈತ್ರಿ ಸರ್ಕಾರವನ್ನು ಪತನಗೊಳಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಅಸ್ಥಿರಗೊಳ್ಳದೇ ಹೋದರೆ ಕಾಂಗ್ರೆಸ್ ಪಕ್ಷವೇ ಸರ್ವನಾಶ ಆಗುತ್ತದೆ. ಸಿದ್ದರಾಮಯ್ಯ ಆಗ ಮನೆಗೆ ಹೋಗುತ್ತಾರೆ. ತಮ್ಮ ಮುಂದಿನ ರಾಜಕೀಯ ಭವಿಷ್ಯ ಉಳಿಯಬೇಕೆಂದರೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ಉರುಳಿಸಬೇಕು ಎಂದು ಯತ್ನಾಳ್ ತಿಳಿಸಿದರು.
ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರುವ ಮೂಲಕ ದೇಶದ ಎಲ್ಲರಿಗೂ ಒಂದೇ ಕಾನೂನು ಅನ್ವಯಿಸಬೇಕು. ಮೋದಿ ಮತ್ತೆ ಪ್ರಧಾನಿ ಆಗಲಿದ್ದು, ಎಲ್ಲರಿಗೂ ಇದು ಅನ್ವಯವಾಗುವಂತೆ ಏಕರೂಪದ ಕಾನೂನು ಜಾರಿಗೆ ತರಲಾಗುವುದು ಎಂದರು.
ಎಲ್ಲರೂ ಒಂದೇ ಮದುವೆಯಾಗಿ, ಎರಡೇ ಮಕ್ಕಳಿಗೆ ಸೀಮಿತವಾಗಬೇಕು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದಲ್ಲಿ ಕಾಶ್ಮೀರ 370 ನೇ ವಿಧಿ ರದ್ದುಪಡಿಸಲಾಗುವುದು. ಸಮಾನ ನಾಗರಿಕ ಸಂಹಿತೆ ತರಲಾಗುವುದು. ಅಯೋಧ್ಯೆಯಲ್ಲಿ ರಾಮ ಮಂದಿರ, ಕಾಶಿ ವಿಶ್ವನಾಥ ದೇವಾಲಯ ಪುನಃ ನಿರ್ಮಾಣ ಮಾಡಲಾಗುವುದು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300 ಕ್ಕಿಂತ ಹೆಚ್ಚು ಸ್ಥಾನ ಗಳಿಸಲಿದ್ದು ಮತ್ತೆ ಮೋದಿ ಪ್ರಧಾನಿ ಆಗಲಿದ್ದಾರೆಂದು ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.

Related Stories

No stories found.

Advertisement

X
Kannada Prabha
www.kannadaprabha.com