ಮತ್ತೆ ಮೊಳಗಿದ 'ಸಿದ್ದರಾಮಯ್ಯ ಸಿಎಂ' ಜಪ: ಸಚಿವರುಗಳಿಗೆ ಕಾಂಗ್ರೆಸ್ ಎಚ್ಚರಿಕೆ

'ಸಿದ್ದರಾಮಯ್ಯ ಸಿಎಂ' ಎಂಬ ರಾಜಕೀಯ ಮೇಳಗೀತ ಮತ್ತೆ ಮೊಳಗುತ್ತಿದೆ. ಇದು ಯಾವ ಮಟ್ಟಿಗೆ ...
ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು: 'ಸಿದ್ದರಾಮಯ್ಯ ಸಿಎಂ' ಎಂಬ ರಾಜಕೀಯ ಮೇಳಗೀತ ಮತ್ತೆ ಮೊಳಗುತ್ತಿದೆ. ಇದು ಯಾವ ಮಟ್ಟಿಗೆ ಹೋಗಿದೆ ಎಂದರೆ ಸ್ವತಃ ಸಿದ್ದರಾಮಯ್ಯನವರೇ ಮೊನ್ನೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ಇದರಿಂದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ನಿಂದ ಕರೆ ಬಂದು ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟಾಗಬಹುದು ಎಂಬ ಆತಂಕದಿಂದ ಇಂತಹ ಹೇಳಿಕೆಗೆ ತಡೆಯೊಡ್ಡಲು ಹೇಳಿದ್ದಾರೆ. ಈ ವಿಷಯ ನಿನ್ನೆ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ವೇಳೆ ಕೂಡ ಪ್ರತಿಧ್ವನಿಸಿತು. ಸಭೆಯಲ್ಲಿ ಅನೌಪಚಾರಿಕವಾಗಿ ಈ ವಿಷಯವನ್ನು ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.
ನಿನ್ನೆ ವಿಧಾನಸೌಧದಲ್ಲಿ ರಾಜ್ಯದ 156 ಬರಪೀಡಿತ ತಾಲ್ಲೂಕುಗಳ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಲು ಮತ್ತು ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಚರ್ಚಿಸಲು ಸಚಿವ ಸಂಪುಟ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಸಿದ್ದರಾಮಯ್ಯ ಸಿಎಂ ವಿಚಾರವನ್ನು ಜೆಡಿಎಸ್ ಸಚಿವರು ಪ್ರಸ್ತಾಪಿಸಿ ಇಂತಹ ಹೇಳಿಕೆ ನೀಡುವುದನ್ನು ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನ ನಾಯಕರು ತಡೆಯಬೇಕೆಂದು ಹೇಳಿದ್ದಾರೆ. ಸ್ವತಃ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರೇ ಇಂತಹ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸಭೆಯ ದಾಖಲೆಯಲ್ಲಿ ಸಂಪುಟ ಸಚಿವರು ಇಂತಹ ವಿಚಾರವನ್ನು ಚರ್ಚೆ ಮಾಡಿಲ್ಲ ಎಂದು ತಿಳಿದುಬಂದಿದೆ.
ಸಂಪುಟ ಸಭೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ, ಈ ವಿಷಯವನ್ನು ಸಂಪುಟ ಸಭೆಯಲ್ಲಿ ಚರ್ಚಿಸಿಯೇ ಇಲ್ಲ ಎಂದಿದ್ದಾರೆ. ಆದರೆ ಹಲವು ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ಆಸೆ ಅಷ್ಟೇ ಸತ್ಯ ಎಂದು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿದೆ.
ಇನ್ನೊಂದೆಡೆ ಮೈತ್ರಿಕೆ ಧಕ್ಕೆಯುಂಟಾಗಬಾರದು, ಸರ್ಕಾರ ಬೀಳಬಾರದು ಎಂದು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೇಳಿಕೆಗಳನ್ನು ಇನ್ನು ಮುಂದೆ ನೀಡದಂತೆ ಮತ್ತು ಅಂತಹ ಹೇಳಿಕೆ ನೀಡಲು ಪ್ರಚೋದಿಸದಂತೆ ಕಾಂಗ್ರೆಸ್ ತನ್ನ ಸಚಿವರಿಗೆ ಎಚ್ಚರಿಕೆ ನೀಡಿದೆ.
ಕಾಂಗ್ರೆಸ್ ನ ಹಿರಿಯ ನಾಯಕರಾದ ಎಂ ಬಿ ಪಾಟೀಲ್ ಮತ್ತು ಪಿ ಟಿ ಪರಮೇಶ್ವರ್ ನಾಯಕ್, ಸಿದ್ದರಾಮಯ್ಯ ತಮ್ಮ ನಾಯಕರು ಎಂದು ಹೇಳಿದ್ದರು. ಇದು ಜೆಡಿಎಸ್ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಕಳೆದ ಬುಧವಾರ ಮುಖ್ಯಮಂತ್ರಿ ಕುಮಾರಸ್ವಾಮಿಯವರೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಭೆ ನಡೆಸಿದ್ದರು. ಅದರಲ್ಲಿ ಯಾರೂ ಕೂಡ ಗೊಂದಲ ಸೃಷ್ಟಿಸಬಾರದು ಎಂದು ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದಿನೇಶ್ ಗುಂಡೂರಾವ್ ಅವರನ್ನು ಸಂಪರ್ಕಿಸಿದಾಗ, ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಅದನ್ನು ಪುನರುಚ್ಛರಿಸಿಲ್ಲ. ಆದರೆ ಇಂತಹ ಹೇಳಿಕೆಗಳನ್ನು ನೀಡಿ ಸರ್ಕಾರವನ್ನು ಮುಜುಗರಕ್ಕೀಡುಮಾಡಬಾರದು ಎಂದು ಈಗಾಗಲೇ ಪಕ್ಷದ ನಾಯಕರು ಶಾಸಕರು ಮತ್ತು ಸಚಿವರುಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಸಚಿವ ಎಂ ಬಿ ಪಾಟೀಲ್ ಅವರು ಮುಂದಿನ ಚುನಾವಣೆ ನಂತರ ಸಿದ್ದರಾಮಯ್ಯ ನಮ್ಮ ನಾಯಕರು ಎಂದು ಹೇಳಿದ್ದೆ. ಮಾಧ್ಯಮದವರು ಮುಂದಿನ ಚುನಾವಣೆ ಪದ ಬಿಟ್ಟು ನಾನು ಹೇಳಿದ್ದನ್ನು ಬೇರೆ ರೀತಿ ವ್ಯಾಖ್ಯಾನಿಸಿದ್ದಾರೆ ಎಂದು ಹೇಳಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com