ಕೆ.ಸಿ.ವೇಣುಗೋಪಾಲ್ ಒಬ್ಬ ಬಫೂನ್, ಮಾನ ಮರ್ಯಾದೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ರೋಷನ್ ಬೇಗ್

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಒಬ್ಬ ಬಫೂನ್, ಅವರನ್ನು ನೋಡುವಾಗ ಅಯ್ಯೋ ಪಾಪ ಅನ್ನಿಸುತ್ತದೆ. ಸಿದ್ದರಾಮಯ್ಯ ಮೊಂಡುತನದಿಂದ ...
ಕೆ.ಸಿ ವೇಣುಗೋಪಾಲ್ ಮತ್ತು ಸಿದ್ದರಾಮಯ್ಯ
ಕೆ.ಸಿ ವೇಣುಗೋಪಾಲ್ ಮತ್ತು ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಒಬ್ಬ ಬಫೂನ್, ಅವರನ್ನು ನೋಡುವಾಗ ಅಯ್ಯೋ ಪಾಪ ಅನ್ನಿಸುತ್ತದೆ. ಸಿದ್ದರಾಮಯ್ಯ ಮೊಂಡುತನದಿಂದ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕಾಂಗ್ರೆಸ್ ಹಿರಿಯ ನಾಯಕ ರೋಷನ್ ಬೇಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಎಕ್ಸಿಟ್ ಪೋಲ್ ಫಲಿತಾಂಶಗಳು ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಸ್ಥಾನಗಳು ಲಭ್ಯವಾಗಲಿವೆ ಎಂಬ ಭವಿಷ್ಯ ನುಡಿದಿರುವ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ರೋಶನ್ ಬೇಗ್ ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಟಿಕೆಟ್ ಕೊಡುವಾಗಲೇ ನಾನು ಅಸಮಾಧಾನ ವ್ಯಕ್ತಪಡಿಸಿದ್ದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಒಂದು ಸೀಟ್ ಕೊಟ್ಟಿರಲಿಲ್ಲ. ಈ ಹಿಂದೆ ಅಲ್ಪಸಂಖ್ಯಾತರಿಗೆ ಮೂರು ಟಿಕೆಟ್ ಕೊಡುತ್ತಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಈ ಎರಡೂ ಸಮುದಾಯದವರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ದುರಹಂಕಾರದಿಂದ ಈ ರೀತಿ ಫಲಿತಾಂಶ ಬರುತ್ತಿದೆ.ಎಚ್‌.ಡಿ. ಕುಮಾರಸ್ವಾಮಿಯವರ ಮನೆ ಬಾಗಿಲಿಗೆ ಹೋಗಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಆನಂತರ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಾ ಓಡಾಡುತ್ತಿದ್ದಾರೆ. ಇದನ್ನೆಲ್ಲ ಜನರು ಗಮನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸಚಿವ ಸಂಪುಟದಿಂದ ತಮ್ಮನ್ನು, ರಾಮಲಿಂಗಾ ರೆಡ್ಡಿಯವರನ್ನು ಕೈಬಿಟ್ಟರು. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ. ಧರ್ಮ ಒಡೆಯುವುದನ್ನು, ಜಾತಿಗಳ ನಾಯಕರನ್ನು ಬೈದರೆ ಜನರು ಒಪ್ಪುತ್ತಾರಾ? ಲಿಂಗಾಯಿತ ಧರ್ಮ ಒಡೆದಿದ್ದೇ 79 ಸ್ಥಾನ ಬರಲು ಕಾರಣ, 79 ಸ್ಥಾನಕ್ಕೆ ಇಳಿಯಲು ಸಿದ್ದರಾಮಯ್ಯ ಅವರೇ ಕಾರಣ, ಯಾವಾಗಲೂ ಒಕ್ಕಲಿಗರನ್ನು ಬಯ್ಯುತ್ತಾರೆ. ಇದರಿಂದ ಒಕ್ಕಲಿಗರು, ಲಿಂಗಾಯತರು ಒಂದು ಕಡೆ ಒಟ್ಟಾದರು. ಕುಮಾರಸ್ವಾಮಿ, ದೇವೇಗೌಡರನ್ನು ಬಾಯಿಗೆ ಬಂದಂತೆ ಬಯ್ಯುತ್ತಾರೆ, ಲಿಂಗಾಯತ ಧರ್ಮ ಒಡೆಯಲು ಪ್ರಯತ್ನಿಸಿದ್ದರಿಂದ  25-30 ಸ್ಥಾನ ಕಡಿಮೆಯಾಯಿತು ಎಂದು ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,  ಸಿಎಲ್‌ಪಿ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ರೋಷನ್ ಬೇಗ್ ಸವಾಲು ಹಾಕಿದರು. 
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತೊರೆಯುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಅಗತ್ಯ ಬಿದ್ದರೆ ನಾನು ಹಾಗೆ ಮಾಡುತ್ತೇನೆ, ಏಕೆಂದರೆ ನಾವು (ಮುಸ್ಲಿಮರು) ಅವಮಾನದೊಂದಿಗೆ ಒಂದು ಪಕ್ಷದಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ. ನಾವು ಘನತೆ ಗೌರವದೊಂದಿಗೆ ಬಾಳುವವರು. ನಮಗೆ ಎಲ್ಲಿ ಗೌರವ ದೊರೆಯುವುದಿಲ್ಲವೋ ನಾವು ಅಲ್ಲಿರಲು ಬಯಸುವುದಿಲ್ಲ. ನಮ್ಮನ್ನು ಯಾರಾದರೂ ಪ್ರೀತಿ ಗೌರವದಿಂದ ಕೂರಿಸಿದರೆ ಅವರೊಂದಿಗೆ ಕೂರುತ್ತೇವೆ  ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com