
ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಒಂದು ವೇಳೆ ತಮ್ಮನ್ನು ಅಸಮರ್ಥ ಎಂದು ಪರಿಗಣಿಸಿ ಸಂಪುಟದಿಂದ ಕೈ ಬಿಟ್ಟರೂ ಚಿಂತಿಸುವುದಿಲ್ಲ ಎಂದು ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ ಹೇಳಿದ್ದಾರೆ.
ಸಂಪುಟದಿಂದ ತೆಗೆದರೂ ಚಿಂತೆ ಇಲ್ಲ. ಹೊರಹೋಗಲು ಸಿದ್ಧನಿದ್ದೇನೆ. ಒಂದು ವೇಳೆ ಸಮರ್ಥನಾಗಿದ್ದಲ್ಲಿ ಮುಂದುವರೆಸಲಿ, ಅದನ್ನು ಬಿಟ್ಟು ಬೇರೆ ನನಗೆ ಯಾವುದೇ ಹುದ್ದೆ ಬೇಡ ಎಂದಿದ್ದಾರೆ.
ಸದ್ಯದಲ್ಲಿಯೇ ಪಕ್ಷ ಪುನಾರಚನೆ ಅಥವಾ ವಿಸ್ತರಣೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ಪ್ರಸ್ತುತ ರಾಜಕೀಯದ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಮಾಧ್ಯಮಗಳಲ್ಲಿ ಮಾತನಾಡದಂತೆ ಅಥವಾ ರಾಜಕೀಯ ಬಗ್ಗೆ ಮಾತನಾಡದಂತೆ ನಮ್ಮ ಪಕ್ಷ ಆದೇಶಿಸಿದೆ ಎಂದು ಹೇಳಿದರು.
ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದಂತೆ ಆಪಕ್ಷದ ಶಾಸಕರು ಹಾಗೂ ವಕ್ತಾರರಿಗೆ ಜೆಡಿಎಸ್ ಕಾರ್ಯಾಧ್ಯಕ್ಷ ನಾರಾಯಣ ರಾವ್ ಆದೇಶ ಹೊರಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಹೀನಾಯವಾಗಿ ಸೋತ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
Advertisement