ಕೇಂದ್ರ ಬಿಜೆಪಿ ನಾಯಕರಿಂದ ಸಿಎಂ ಯಡಿಯೂರಪ್ಪ ಟಾರ್ಗೆಟ್: ಯತ್ನಾಳ್

ರಾಜ್ಯಕ್ಕೆ ನೆರೆ ಪರಿಹಾರ ನೀಡದೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಹೀಗೆಯೇ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಹರಿಹಾಯ್ದಿದ್ದಾರೆ
ಯಡಿಯೂರಪ್ಪ
ಯಡಿಯೂರಪ್ಪ
Updated on

ಬೆಂಗಳೂರು: ರಾಜ್ಯಕ್ಕೆ ನೆರೆ ಪರಿಹಾರ ನೀಡದೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಹೀಗೆಯೇ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಹರಿಹಾಯ್ದಿದ್ದಾರೆ

ವಿಧಾನ ಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂತೆಂತಹವರನ್ನೋ ಜನರು ಮನೆಗೆ ಕಳುಹಿಸಿದ್ದಾರೆ.ಇವರೆಲ್ಲಾ ಯಾವ ಲೆಕ್ಕ,ಇವರನ್ನು ಕೆಳಗಿಳಿಸುವುದು ನಾವಲ್ಲ ರಾಜ್ಯದ ಜನರೇ ಇಳಿಸುತ್ತಾರೆ ಎಂದು ಹೇಳುವ ಮೂಲಕ ಕೇಂದ್ರದ ಧೋರಣೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. 

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಕೇಂದ್ರ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಅವರನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದಲೇ ರಾಜ್ಯಕ್ಕೆ ಸರಿಯಾಗಿ ಅನುದಾನ ನೀಡುತ್ತಿಲ್ಲ.ರಾಜ್ಯದಲ್ಲಿ ಈಗ ಚುನಾವಣೆ ಇಲ್ಲ ಎಂದು ಈ ರೀತಿ ವರ್ತಿಸುತ್ತಿರುವುದು ಸರಿಯಲ್ಲ. ರಾಜ್ಯದ ಜನ ಬಿಜೆಪಿಗೆ 25 ಸಂಸದರನ್ನು ಗೆಲ್ಲಿಸಿ ಕಳುಹಿಸಿದ್ದಾರೆ.ಇಡೀ ದಕ್ಷಿಣ ಭಾರತದಲ್ಲಿ ಇಷ್ಟು ಸಂಖ್ಯೆ ಸಂಸದರನ್ನು ಯಾವ ರಾಜ್ಯ ನೀಡಿದೆ ಎಂದು ಅವರು ಪ್ರಶ್ನಿಸಿದ್ದಾರೆ.
  
ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದು ನಾವು. ಜನರಿಗೆ ನಾವೇ ಉತ್ತರ ನೀಡಬೇಕು. ಇಡೀ ಉತ್ತರ ಕರ್ನಾಟಕದ ಜನ ನೆರೆ ಹಾನಿಯಿಂದ ಪರದಾಡುತ್ತಿದ್ದಾರೆ.ಬಿಹಾರದ ನೆರೆ ಸಂತ್ರಸ್ತರ ಬಗ್ಗೆ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿ ಸಾಂತ್ವನ ಹೇಳುತ್ತಾರೆ ಅಂದರೆ ನಮ್ಮ ರಾಜ್ಯದ  ಏನು ಮಾಡಿದ್ದಾರೆ.? ಜನರಿಗೆ ಜನಪ್ರತಿನಿಧಿಗಳಾದ ನಾವೇನು ಉತ್ತರ ಕೊಡಬೇಕು? ಸಾಮಾಜಿಕ ಜಾಲತಾಣ ಗಳಲ್ಲಿ ಜನ ನಮ್ಮ ವಿರುದ್ಧ ಪ್ರಶ್ನೆ ಮಾಡುತ್ತಿದ್ದಾರೆ. ರಾಜ್ಯದ ಶಾಸಕರ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿ ಕರೆದೊಯ್ಯಿರಿ ಪ್ರಧಾನಿ ಹಾಗೂ ಅಮಿತ್ ಷಾ ಬಳಿ ನಾವು ಮಾತನಾಡುತ್ತೇವೆ.  ನಾನೂ ಸಂಸದನಾಗಿದ್ದವನು ,ನನಗೂ ಎಲ್ಲಾ ಅನುಭವ ಇದೆ ಎಂದು ಬಸನಗೌಡ ಪಾಟೀಲ್ ತಿಳಿಸಿದ್ದಾರೆ.
  
ನಮ್ಮ ರಾಜ್ಯದ ಸಂಸದರು ಪ್ರಧಾನಿ ಹಾಗೂ ಗೃಹ ಸಚಿವರ ಬಳಿ ನೆರೆ ಪರಿಹಾರ ನೀಡುವಂತೆ ಪ್ರಶ್ನೆ ಮಾಡಬೇಕು ಎಂದ ಅವರು,ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪಕ್ಷ ಕಟ್ಟುವುದು ಸಾಧ್ಯವಿಲ್ಲ.ಹಳ್ಳಿ ಹಳ್ಳಿಗಳಲ್ಲಿ ಸುತ್ತಾಡಿ ಪಕ್ಷ ಕಟ್ಟಿದವರು ನಾವು. ಇಂಗ್ಲಿಷ್ ಬಂದ ಮಾತ್ರಕ್ಕೆ ಅಂತಾರಾಷ್ಟ್ರೀಯ ನಾಯಕರಾಗುವುದಿಲ್ಲ ಎಂದು ಈಶ್ವರಪ್ಪ,ಸಂಸದ ತೇಜಸ್ವಿ ಸೂರ್ಯ ವಿರುದ್ಧ ಗುಡುಗಿದ್ದಾರೆ.
  
ಮುಖ್ಯಮಂತ್ರಿ  ಯಡಿಯೂರಪ್ಪ ಅವರ ಬಗ್ಗೆಯೇ ಕೆಲವರು ಮಾತಾನಾಡುತ್ತಿದ್ದಾರೆ.ಗೂಟದ ಕಾರು ಇಟ್ಟುಕೊಂಡು  ಓಡಾಡುವವರೇ ಹಿಂಗೇ ಮಾತಾಡಿದರೆ ಹೇಗೆ ? ಹಾಗಾದರೆ ಸಚಿವ ಸ್ಥಾನದಲ್ಲಿ ಯಾಕೆ ಇರುತ್ತೀರಿ ರಾಜೀನಾಮೆ ‌ಕೊಡಿ.ತುಂಬಾ ಜನ ಪಕ್ಷ ಕಟ್ಟಿದವರು ತುಂಬಾ ಜನ ಸರತಿಯಲ್ಲಿದ್ದಾರೆ ಎಂದು ಪರೋಕ್ಷವಾಗಿ ಕೆ.ಎಸ್. ಈಶ್ವರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.   

ವಿಜಯನಗರ ಜಿಲ್ಲೆ ರಚನೆ ಬಗ್ಗೆ ಬಿಜೆಪಿ ಶಾಸಕರ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಅವರು,ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಬಳ್ಳಾರಿ ಶಾಸಕರು, ಸಂಸದರ ಸಭೆ ಕರೆದಿದ್ದಾರೆ. ಈಗ ನಾನು  ಬಳ್ಳಾರಿ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ.ಕೆಲವರು ಹೊಸ ಜಿಲ್ಲೆ ಮಾಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಕೆಲವರು ಹೊಸ ಜಿಲ್ಲೆ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನಾಳೆ ಏನು ತೀರ್ಮಾನ ಆಗುತ್ತದೆಯೋ ಕಾದು ನೋಡೋಣ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com