ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕಿತ್ತಾಟ: ಕಾಂಗ್ರೆಸ್ ಹೈಕಮಾಂಡ್ ಗೆ ಹೊಸ ತಲೆನೋವು

ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಯಾರು ಎಂಬ ಬಗ್ಗೆ ಕಾಂಗ್ರೆಸ್ ನಲ್ಲಿ ತೀವ್ರ ಚರ್ಚೆ, ಗೊಂದಲ, ಕಿತ್ತಾಟ ಆರಂಭವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು; ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಯಾರು ಎಂಬ ಬಗ್ಗೆ ಕಾಂಗ್ರೆಸ್ ನಲ್ಲಿ ತೀವ್ರ ಚರ್ಚೆ, ಗೊಂದಲ, ಕಿತ್ತಾಟ ಆರಂಭವಾಗಿದೆ.ಕಾಂಗ್ರೆಸ್ ಹೈಕಮಾಂಡ್ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರನ್ನು ಬೆಂಗಳೂರಿಗೆ ಕಳುಹಿಸಿ ಪಕ್ಷದ ನಾಯಕರು ಮತ್ತು ಶಾಸಕರನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸುವಂತೆ ಹೇಳಿದ್ದು, ನಿನ್ನೆ ಅವರು 63 ಕಾಂಗ್ರೆಸ್ ಶಾಸಕರು ಮತ್ತು ನಾಯಕರನ್ನು ಭೇಟಿ ಮಾಡಿದ್ದಾರೆ.


ಕಾಂಗ್ರೆಸ್ ನಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯಾರು ಎಂಬ ಪ್ರಶ್ನೆ ಮೂಡಲು ಕಾರಣ ಒಗ್ಗಟ್ಟಿನ ಕೊರತೆ, ಹಲವರು ತಮಗೆ ನಾಯಕ ಹುದ್ದೆ ಬೇಕು ಎಂದು ಬೇಡಿಕೆಯಿಟ್ಟಾಗ ಭಿನ್ನಮತ ಸ್ಫೋಟಗೊಂಡಿದೆ. ಇಲ್ಲಿ ಎರಡು ಗುಂಪು ಇದೆ, ಒಂದು ಮೂಲ ಕಾಂಗ್ರೆಸ್ಸಿಗರು ಹೆಚ್ ಕೆ ಪಾಟೀಲ್ ಬಣ ಮತ್ತು ಹೊರಗಿನಿಂದ ಬಂದ ಸಿದ್ದರಾಮಯ್ಯ ಬಣ. 


ಇನ್ನು ಕೇವಲ ಮೂರು ದಿನಗಳಲ್ಲಿ ಅಂದರೆ ಈ ತಿಂಗಳು 10ರಿಂದ ಮೂರು ದಿನಗಳ ವಿಧಾನಸಭೆ ಅಧಿವೇಶನ  ನಡೆಯುತ್ತದೆ. ಹೀಗಿರುವಾಗ ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ನಿಂದ ಯಾರು ನಾಯಕ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಇನ್ನೊಂದೆಡೆ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ, ಎರಡೂ ಸದನಗಳ ಸಚೇತಕ ಹುದ್ದೆ, ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹುಡುಕಾಟ ಕೂಡ ನಡೆಯುತ್ತಿದೆ. 


ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಈ ಬಾರಿ ಕೂಡ ಕೆಪಿಸಿಸಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಈ ಹುದ್ದೆಗೆ ಅಕ್ಟೋಬರ್ 9ರಂದು ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. 


ನಿನ್ನೆ ಏನು ನಡೆಯಿತು: ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ನಿನ್ನೆ ಬೆಂಗಳೂರಿನಲ್ಲಿ ಮಧುಸೂದನ್ ಮಿಸ್ತ್ರಿ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದ ವೇಳೆ ಸಿದ್ದರಾಮಯ್ಯ ಅವರ ನಿಷ್ಠಾವಂತ ಕೆಲ ಶಾಸಕರು ಗೇಟ್ ನ್ನು ಬಲವಂತವಾಗಿ ತೆಗೆಸಿ ಮಿಸ್ತ್ರಿ ಅವರ ಭೇಟಿಗೆ ಅವಕಾಶ ಕೇಳಿದರು. ಭೈರತಿ ಸುರೇಶ್, ಅಶೋಕ್ ಪಟ್ಟಣ್, ಜಮೀರ್ ಅಹ್ಮದ್, ಕೃಷ್ಣ ಭೈರೇಗೌಡ, ಎಂಬಿ ಪಾಟೀಲ್ ಅವರು ಸಿದ್ದರಾಮಯ್ಯನವರ ಕಾವೇರಿ ನಿವಾಸದಲ್ಲಿ ಸಭೆ ನಡೆಸಿ ಶಾಸಕರ ಸಹಿ ಸಂಗ್ರಹಿಸಿ ಸಿದ್ದರಾಮಯ್ಯನವರನ್ನೇ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ, ಈ ಪತ್ರಕ್ಕೆ 52 ಶಾಸಕರು ಮತ್ತು 27 ವಿಧಾನಪರಿಷತ್ ಸದಸ್ಯರು ಸಹಿ ಹಾಕಿದ್ದಾರೆ.


ಅಧಿಕಾರಕ್ಕಾಗಿ ಈ ಕಿತ್ತಾಟದ ಮಧ್ಯೆ, ರಾಜ್ಯಸಭೆಯ ಮಾಜಿ ಸದಸ್ಯ ಹೆಚ್ ಹನುಮಂತಪ್ಪ ನಿನ್ನೆ ಕೆಪಿಸಿಸಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು. ಈಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವಂತಹ ಸಂದರ್ಭದಲ್ಲಿ ನಾವು ಮೂಲ ಕಾಂಗ್ರೆಸ್ಸಿಗರು, ಹೊರಗಿನವರು ಎಂದು ಹೇಳಿಕೊಂಡು ಕಿತ್ತಾಡುವ ಬದಲು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com