ಇವಿಎಂ ವಿರುದ್ಧದ ಹೋರಾಟಕ್ಕೆ ಸಿದ್ದರಾಮಯ್ಯ ಕರೆ; ಕಟೀಲ್‍ಗೆ ಕನಿಷ್ಠ ಜ್ಞಾನವೂ ಇಲ್ಲ ಎಂದ ಮಾಜಿ ಸಿಎಂ

ಕಳೆದ ಲೋಕಸಭೆ ಚುನಾವಣೆಯಲ್ಲಿ ಇವಿಎಂ ದುರುಪಯೋಗವಾಗಿರುವ ಬಗ್ಗೆ ಅನುಮಾನವಿದ್ದು, ಇವಿಎಂ ವಿರುದ್ಧ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಕರೆ ನೀಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಇವಿಎಂ ದುರುಪಯೋಗವಾಗಿರುವ ಬಗ್ಗೆ ಅನುಮಾನವಿದ್ದು, ಇವಿಎಂ ವಿರುದ್ಧ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಕರೆ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಘಟಕದ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದುವರೆದ ರಾಷ್ಟ್ರಗಳಾದ ಅಮೇರಿಕಾ, ಯುರೋಪ್, ರಷ್ಯಾಗಳಲ್ಲಿ ಇವಿಎಂ ತಿರಸ್ಕರಿಸಲಾಗಿದೆ. ಹೀಗಾಗಿ ನಮ್ಮ ದೇಶದಲ್ಲಿಯೂ ಚುನಾವಣಾ ಆಯೋಗ ವಿದ್ಯುನ್ಮಾನ ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು. ತಾವು ಅಧಿಕಾರದಲ್ಲಿ ಇದ್ದಿದ್ದರೆ ಇವಿಎಂ ಬಳಕೆಯನ್ನು ನಿಷೇಧಿಸುತ್ತಿದ್ದೆ. ಇವಿಎಂ ವಿರುದ್ಧದ ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷಗಳು ಒಂದಾಗುತ್ತಿದ್ದು, ಕಾಂಗ್ರೆಸ್ ಇದರ ನೇತೃತ್ವ ವಹಿಸಿಕೊಳ್ಳಲಿದೆ ಎಂದರು.

ದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೇ ರಾಷ್ಟ್ರೀಯ ಪಕ್ಷಗಳಿವೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಮುಗಿಸಿದರೆ ಎಲ್ಲವನ್ನು ಮುಗಿಸಿದಂತಾಗುತ್ತದೆ ಎಂದು ಪ್ರಧಾನಿ ಮೋದಿ ಭಾವಿಸಿದ್ದಾರೆ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ಭಾವನಾತ್ಮಕ ವಿಷಯಗಳಾದ ಹಿಂದುತ್ವ, ರಾಮಮಂದಿರ, ಬಾಲಕೋಟ್ ದಾಳಿ, ಕಾಶ್ಮೀರ 370ನೇ ವಿಧಿ ರದ್ಧತಿ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹಾಳಾಗಿದೆ. ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರವೇ ಜಿಡಿಪಿ ಶೇ 5 ರಷ್ಟಿದೆ. ಆದರೆ ವಾಸ್ತವವಾಗಿ ಜಿಡಿಪಿ ಶೇಕಡಾ 3 ಕ್ಕೆ ಇಳಿದಿದೆ ಎಂದರು.

ನೋಟ್ ಬ್ಯಾನ್, ಜಿಎಸ್‌ಟಿಯಂತಹ ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ಸಣ್ಣ ಕೈಗಾರಿಕೆಗಳು ಸೇರಿದಂತೆ ಬಹುತೇಕ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ನೇರ ಕಾರಣ. ದೇಶದಲ್ಲಿ ಆರ್ಥಿಕತೆ ಕುಸಿತವಾಗಿದ್ದು, ದೇಶದ ಜನತೆ ಈಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಇದಕ್ಕಾಗಿಯೇ ಲೋಕಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಆ ಪಕ್ಷ ಟಿಕೆಟ್ ನೀಡಿರಲಿಲ್ಲ. ಆದರೆ ಅಧಿಕಾರ ಹಾಗೂ ಸಂಪತ್ತು ಎಲ್ಲರಿಗೂ ಸಮಾನ ಹಂಚಿಕೆಯಾಗಬೇಕೆಂಬ ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ಹಿಂದುಳಿದ ವರ್ಗದ ಏಳು ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೆ ತಂದ ಯೋಜನೆಗಳ ಬಗ್ಗೆ ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸದೇ ಇರುವುದರಿಂದ ಪಕ್ಷದ ಸೋಲಿಗೆ ಕಾರಣವಾಯಿತು. ಜನರು ಈಗ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ನಾಲ್ಕು ಗೋಡೆಯ ಮಧ್ಯೆ ಇರುವುದನ್ನು ಬಿಟ್ಟು ಬೀದಿಗಿಳಿದು ಬಿಜೆಪಿ ವಿರುದ್ಧ ಹೋರಾಡಬೇಕು ಎಂದರು.

ಇದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ, ಐಟಿ, ಇಡಿ ಕೇಂದ್ರ ಅಧೀನ ಸಂಸ್ಥೆಗಳೆಂಬ ಕನಿಷ್ಠ ಜ್ಞಾನವೂ ಕಟೀಲ್‍ಗೆ ಇಲ್ಲ ಎಂದು ವ್ಯಂಗ್ಯವಾಡಿದ್ದರು.

ಸಿದ್ದರಾಮಯ್ಯ ಅವರಿಂದಲೇ ಡಿ ಕೆ ಶಿವಕುಮಾರ್ ಜೈಲು ಸೇರಿದ್ದಾರೆ ಎಂಬ ನಳಿನ್ ಕುಮಾರ್ ಕಟೀಲು ಆರೋಪಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಕಟೀಲು ದುರುದ್ದೇಶದಿಂದ ಈ ಕುರಿತು ಹೇಳಿದ್ದಾರೆ. ಐಟಿ,ಇಡಿ ಯಾರ ಅಧೀನದಲ್ಲಿದೆ ಅನ್ನೋದು ಅವರಿಗೆ ಗೊತ್ತಿಲ್ಲ. ಇವೆಲ್ಲ ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಹುಳಿ ಹಿಂಡುವುದು, ಬೆಂಕಿ ಹಚ್ಚೋದು ಬಿಜೆಪಿಯವರ ಕೆಲಸವಾಗಿದೆ. ಬಿಜೆಪಿಯವರು ಕನಿಷ್ಠ ಜ್ಙಾನ ಇಲ್ಲದ ಕಟೀಲ್‍ರನ್ನು ರಾಜ್ಯಾಧ್ಯಕ್ಷರನ್ನಾಗಿ ಏಕೆ ಮಾಡಿದರೋ ಗೊತ್ತಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com