'ಹಿಂದಿ'ಪರ ಅಮಿತಾ ಶಾ ಒಲವು; ಉಪ ಚುನಾವಣೆ ಹೊಸ್ತಿಲಲ್ಲಿ ಅಡಕತ್ತರಿಯಲ್ಲಿ ರಾಜ್ಯ ಬಿಜೆಪಿ

ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕು ಎಂದು ಕೇಂದ್ರ ಗೃಹ ಖಾತೆ ಸಚಿವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ ರಾಜ್ಯ ಬಿಜೆಪಿ ಪಾಳಯಕ್ಕೆ ಮುಳುವಾಗುವ ಸಾಧ್ಯತೆಯಿದೆ. 
ಅಮಿತ್ ಶಾ
ಅಮಿತ್ ಶಾ
Updated on

ಬೆಂಗಳೂರು: ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕು ಎಂದು ಕೇಂದ್ರ ಗೃಹ ಖಾತೆ ಸಚಿವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ ರಾಜ್ಯ ಬಿಜೆಪಿ ಪಾಳಯಕ್ಕೆ ಮುಳುವಾಗುವ ಸಾಧ್ಯತೆಯಿದೆ.


ರಾಜ್ಯ ರಾಜಕೀಯದಲ್ಲಿ ಈಗ ಉಪ ಚುನಾವಣೆಯ ಹೊತ್ತು. 17 ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ಯದಲ್ಲಿಯೇ ಉಪ ಚುನಾವಣೆ ನಡೆಯಲಿದೆ. ಹಿಂದಿ ಭಾಷೆಗೆ ಒತ್ತು ನೀಡುತ್ತಿರುವುದು ಕನ್ನಡಪರ ಸಂಘಟನೆಗಳ ಕಣ್ಣು ಕೆಂಪಗಾಗಿಸಿದೆ.


ಜನರಿಂದ ಬರುವ ಪ್ರತಿಕ್ರಿಯೆಗಳಿಗೆ ಉತ್ತರ ಕೊಡಲಾಗದ ಪರಿಸ್ಥಿತಿ ರಾಜ್ಯ ಬಿಜೆಪಿ ನಾಯಕರಿಗೆ ಬಂದೊದಗಿದೆ.ತನ್ನ ಆರ್ ಎಸ್ಎಸ್ ಸಿದ್ದಾಂತದ ಮೂಲಕ ಸ್ಥಳೀಯ ಭಾಷೆಗೆ ಒತ್ತು ನೀಡುತ್ತಿದ್ದ ಬಿಜೆಪಿ ಇದೀಗ ಹಿಂದಿ ಭಾಷೆಯ ಪ್ರೋತ್ಸಾಹಕ್ಕೆ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿಗೆ ಬಂದಿದೆ.


ಜನ ಸಂಘದ ದಿನಗಳಿಂದಲೇ ಬಿಜೆಪಿಯ ನಾಯಕರಾದ ದೀನ್ ದಯಾಳ್ ಉಪಾಧ್ಯಾಯರಂಥವರು ಪ್ರತಿ ರಾಜ್ಯದಲ್ಲಿ ಸ್ಥಳೀಯ ಭಾಷೆಯೇ ಅಂತಿಮ ಎನ್ನುತ್ತಿದ್ದರು. ಆರ್ ಎಸ್ಎಸ್ ಕೂಡ ಮಾತೃಭಾಷೆ ಶ್ರೇಷ್ಠ ಎಂದು ಆರಂಭದಿಂದಲೂ ನಂಬಿಕೆಯಿಟ್ಟುಕೊಂಡು ಬಂದಿತ್ತು ಎನ್ನುತ್ತಾರೆ ಆರ್ ಎಸ್ಎಸ್ ಸಿದ್ದಾಂತವನ್ನು ಅನುಸರಿಸುತ್ತಿರುವ ಕರ್ನಾಟಕದ ಸಚಿವರೊಬ್ಬರು.


ಈ ಬಗ್ಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅತ್ಯಂತ ಜಾಗ್ರತೆಯಿಂದ ಉತ್ತರಿಸುತ್ತಾರೆ: ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಮೊಘಲರು, ಪೋರ್ಚುಗೀಸರು ಮತ್ತು ಬ್ರಿಟಿಷರು ಈ ದೇಶವನ್ನಾಳಿದರೂ ಕನ್ನಡವನ್ನು ಅಳಿಸಲು ಸಾಧ್ಯವಾಗಲಿಲ್ಲ. ಈ ಜಗತ್ತಿನಲ್ಲಿ  ಜನರು ಇರುವವರೆಗೂ ಕನ್ನಡ ಭಾಷೆ ಇರುತ್ತದೆ ಎಂದು ಹೇಳಿದರು.


ಕಾರಜೋಳ ಅವರ ಹೇಳಿಕೆಯನ್ನು ಗಮನಿಸಿದಾಗ ರಾಜ್ಯ ಬಿಜೆಪಿ ನಾಯಕರು ಕನ್ನಡ ವಿರೋಧಿಗಳೆಂದು ಜನರ ಮನಸ್ಸಿನಲ್ಲಿ ಮೂಡದಂತೆ ಎಚ್ಚರವಹಿಸುತ್ತಿದ್ದಾರೆ, ಇನ್ನೊಂದೆಡೆ ರಾಷ್ಟ್ರೀಯ ಅಧ್ಯಕ್ಷರ ಮಾತನ್ನು ಧಿಕ್ಕರಿಸಿದಂತೆ ಆಗಬಾರದು ಎಂದು ಕೂಡ ನೋಡುತ್ತಿದ್ದಾರೆ. 


ಈ ಮಧ್ಯೆ ಸಹಜವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ನಾಯಕರು ಹೇಡಿಗಳು. ಹೈಕಮಾಂಡ್ ಪ್ರಶ್ನಿಸುವ ತಾಕತ್ತು ಅವರಿಗಾರಿಗೂ ಇಲ್ಲ. ಯಡಿಯೂರಪ್ಪನವರು ದುರ್ಬಲ ಮುಖ್ಯಮಂತ್ರಿ. ಅವರು ಮಂಡ್ಯದವರಾದರೂ ಕೂಡ ಈ ಮಣ್ಣಿನ ಸೊಗಡು, ಸಂಸ್ಕೃತಿ, ಆತ್ಮ ಗೌರವದ ಬಗ್ಗೆ ಅವರಿಗೆ ಕಿಂಚಿತ್ತೂ ಗೌರವ ಇಲ್ಲ ಎನ್ನುತ್ತಾರೆ ಮಾಜಿ ಸಿಎಂ ಸಿದ್ದರಾಮಯ್ಯನವರು.


ಆದರೂ ಕೆಲವು ಬಿಜೆಪಿ ನಾಯಕರು ಎಚ್ಚರಿಕೆಯಿಂದ ಕನ್ನಡ ಪರವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಕನ್ನಡಕ್ಕೆ ಪ್ರಾಮುಖ್ಯತೆ ಸಿಗಬೇಕು. ಕನ್ನಡ ಭಾಷೆಯ ಮುಂದೆ ಬೇರಾವ ಭಾಷೆ ಕೂಡ ಇಲ್ಲ. ಒಂದು ಭಾಷೆಯನ್ನು ಹೇರಿಕೆ ಮಾಡುವ ಮೂಲಕ ಅದನ್ನು ಕಲಿಯುವ ಪ್ರೀತಿ ಜನರಲ್ಲಿ ಹುಟ್ಟುವುದಿಲ್ಲ. ಅದನ್ನು ಪ್ರೀತಿಯಿಂದ ಕಲಿಯಬೇಕು. ಅಮಿತ್ ಶಾ ಅವರು ಹೇಳಿದ ಇಡೀ ಭಾಷಣದ ಒಂದು ಸಾಲನ್ನು ಇಟ್ಟುಕೊಂಡು ಇಂದು ಇಷ್ಟೊಂದು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಅವರು ಬೇರೆ ಭಾಷೆಗಳನ್ನು ಕೂಡ ಬೆಳೆಸಬೇಕು ಎಂದು ಹೇಳಿದ್ದಾರೆ ಎನ್ನುತ್ತಾರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್.


ಯಾರ ಮೇಲೆಯೂ ಭಾಷೆ ಹೇರಿಕೆ ಮಾಡುವುದು ಒಳ್ಳೆಯದಲ್ಲ. ಪ್ರತಿಯೊಬ್ಬರಿಗೂ ತಮ್ಮ ಮಾತೃಭಾಷೆಯನ್ನು ಬಳಸುವ ಸ್ವಾತಂತ್ರ್ಯವಿದೆ. ಸ್ಥಳೀಯ ಭಾಷೆಗಳನ್ನು ಪ್ರೋತ್ಸಾಹಿಸುವುದು ಬೇಡ ಎಂದು ಅಮಿತಾ ಶಾ ಅವರು ಹೇಳಿಯೇ ಇಲ್ಲ. ಒಂದು ರಾಷ್ಟ್ರಭಾಷೆಯ ಅಗತ್ಯವಿದೆ ಎಂದು ಮಾತ್ರ ಹೇಳಿದ್ದಾರೆ ಎನ್ನುತ್ತಾರೆ ಕಲಬುರಗಿ ಸಂಸದ ಉಮೇಶ್ ಜಾಧವ್ .

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com