ಮಧ್ಯಂತರ ಚುನಾವಣೆ ತಯಾರಿ? ರಾಜ್ಯಕ್ಕೆ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯಕ್ಕೆ ಒಂದು ದಿನದ ಪ್ರವಾಸ ಹಮ್ಮಿಕೊಂಡಿದ್ದು, ಇವರ ಭೇಟಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಪೂರ್ವ ಸಿದ್ಧತೆ ಆರಂಭಿಸುವ ಲಕ್ಷಣಗಳು ಗೋಚರಿಸಿವೆ.
ಜೆ.ಪಿ ನಡ್ಡಾ
ಜೆ.ಪಿ ನಡ್ಡಾ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯಕ್ಕೆ ಒಂದು ದಿನದ ಪ್ರವಾಸ ಹಮ್ಮಿಕೊಂಡಿದ್ದು, ಇವರ ಭೇಟಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಪೂರ್ವ ಸಿದ್ಧತೆ ಆರಂಭಿಸುವ ಲಕ್ಷಣಗಳು ಗೋಚರಿಸಿವೆ.

ಭಾನುವಾರ ನಗರಕ್ಕೆ ಆಗಮಿಸಲಿರುವ ನಡ್ಡಾ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಂಘಟನೆ, ಮಧ್ಯಂತರ ಚುನಾವಣೆ ನಡೆಯುವ, ಇಲ್ಲವೆ ಉಪ ಚುನಾವಣಾ ತಯಾರಿ ಆರಂಭಿಸುವ ಸಂಬಂಧ ಪಕ್ಷದ ಪ್ರಮುಖರು, ಮುಖಂಡರ ಜೊತೆ ಚರ್ಚಿಸಲಿದ್ದಾರೆ.

ಸಂಜೆ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಪಕ್ಷದ ಜಿಲ್ಲಾಧ್ಯಕ್ಷರು, ಬ್ಲಾಕ್ ಮತ್ತು ಬೂತ್ ಮಟ್ಟದ ಅಧ್ಯಕ್ಷರ ಸಭೆಯಲ್ಲಿ ಜೆ.ಪಿ.ನಡ್ಡಾ ಭಾಗಿಯಾಗಲಿದ್ದಾರೆ. ಈ ವೇಳೆ ಮಧ್ಯಂತರ ಚುನಾವಣೆಗೆ ಸಜ್ಜಾಗುವಂತೆ ಸೂಚಿಸಲಿದ್ದಾರೆ ಎನ್ನಲಾಗಿದೆ.

ಹಾಗೊಂದು ವೇಳೆ ವಿಧಾನಸಭೆಗೆ ಉಪ ಚುನಾವಣೆ ಎದುರಾದರೆ ಅದರ ತಯಾರಿ, ಸದಸ್ಯತ್ವ ಅಭಿಯಾನ ,ಪಕ್ಷ ಸಂಘಟನೆ , ಪದಾಧಿಕಾರಿಗಳ ನೇಮಕ ಸಂಬಂಧ ಅವರು ಪಕ್ಷದ ನಾಯಕರು, ಪ್ರಮುಖರ ಜೊತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಉಪ ಚುನಾವಣೆ ನಡೆಯುವ 17 ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಾಹಿತಿ ಸಂಗ್ರಹಿಸಲು ಸಮೀಕ್ಷಾ ತಂಡ ರಚನೆ, ಚುನಾವಣಾ ಉಸ್ತುವಾರಿ, ಚುನಾವಣಾ ಸಮಿತಿಗಳ ರಚನೆ, ಪಕ್ಷದ ಕಾರ್ಯಕ್ರಮಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ಸಮಾಲೋಚನೆ ನಡೆಸಲಿದ್ದಾರೆ.

ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪಕ್ಷದ ಮುಂದಿನ ಕಾರ್ಯತಂತ್ರಗಳು, ಸರ್ಕಾರದ ಕಾರ್ಯವೈಖರಿ, ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಜೆ.ಪಿ.ನಡ್ಡಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಮುಖ್ಯಮಂತ್ರಿ ಜೊತೆ ಪ್ರತ್ಯೇಕ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಸಂಸತ್ ಸದಸ್ಯರು, ಶಾಸಕರ ಜೊತೆಯೂ ನಡ್ಡಾ ಚೆರ್ಚೆ ನಡೆಸುವ ಕಾರ್ಯಕ್ರಮವಿದೆ. ಆದರೆ ಸೀಮಿತ ಸಮಯಾವಕಾಶ ಹಿನ್ನಲೆಯಲ್ಲಿ ಉಪ ಚುನಾವಣೆ ಹಾಗೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಇದರ ಜೊತೆ ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಸಂಬಂಧ ಉಪನ್ಯಾಸ ಕಾರ್ಯಕ್ರಮ, ಅದಮ್ಯ ಚೇತನ ಸಂಸ್ಥೆಯ ಕಾರ್ಯಕ್ರಮದಲ್ಲಿಯೂ ಜೆ.ಪಿ.ನಡ್ಡಾ ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com