ಬೆಂಗಳೂರು: ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಹಲವು ಜಿಲ್ಲೆಗಳ ಉಸ್ತುವಾರಿ ವಹಿಸಿದ್ದಾರೆ. ಹೀಗಾಗಿ ತಮಗೆ ಉಸ್ತುವಾರಿ ವಹಿಸಿರುವ ಜಿಲ್ಲೆಗಳಲ್ಲಿ ತಮ್ಮ ಕೆಲಸ ಆರಂಭಿಸಲು ಸಜ್ಜಾಗುತ್ತಿದ್ದಾರೆ.
ಸಚಿವರು ತಾವು ಭೇಟಿ ನೀಡುವ ಗ್ರಾಮಗಳ ಶಾಲೆ, ಆಸ್ಪತ್ರೆ, ವಸತಿ ನಿಲಯ ಮತ್ತು ಮಹಿಳಾ ಸಬಲೀಕರಣ ಕೇಂದ್ರಗಳಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆಯಿದೆ. ಈಗಾಗಲೇ ಇದಕ್ಕಾಗಿ ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದು ಮಾಹಿತಿಗಳು ತಿಳಿಸಿವೆ.
17 ಸಚಿವರು ಆಗಸ್ಟ್ 19 ರಂದು ಪ್ರಮಾಣ ವಚನ ಸ್ವೀಕರಿಸಿದ್ದು, ಒಂದು ತಿಂಗಳ ನಂತರ ಅವರಿಗೆ ಜಿಲ್ಲಾ ಉಸ್ತುವಾರಿ ಉಸಾಬರಿ ನೀಡಲಾಗಿದೆ, ಕೆಲವು ಸಚಿವರು ಈಗಾಗಲೇ ತಮ್ಮನ್ನು ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಆರೋಗ್ಯ ಸಚಿವ ಬಿ. ಶ್ರೀರಾಮುಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾಸ್ತವ್ಯ ಹೂಡುವುದಾಗಿ ಘೋಷಿಸಿದ್ದಾರೆ. ಹಳ್ಳಿಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಿದರೇ ಆ ಆಸ್ಪತ್ರೆಯಲ್ಲಿರುವ ಕುಂದು ಕೊರತೆ, ರೋಗಿಗಳ ಸಮಸ್ಯೆ ಹಾಗೂ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯುವುದು ಸುಲಭ ಎಂಬುದು ಶ್ರೀರಾಮುಲು ಅವರ ಅಭಿಪ್ರಾಯವಾಗಿದೆ. ಹೀಗಾಗಿ ತಿಂಗಳಲ್ಲಿ ಎರಡು ದಿನ ಸರ್ಕಾರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡುವುದಾಗಿ ತಿಳಿಸಿದ್ದಾರೆ.
ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಹೂಡಲು ಪ್ಲಾನ್ ಮಾಡಿದ್ದಾರೆ. ತುಮಕೂರಿನ ಪಾವಗಡ ತಾಲೂಕಿನ ಅಚ್ಚಮನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಗುರುವಾರ ವಾಸ್ಯವ್ಯ ಹೂಡುವುದರ ಮೂಲಕ ತಮ್ಮ ಕೆಲಸ ಆರಂಭಿಸಿದ್ದಾರೆ.
ಇನ್ನೂ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ, ಹಿಂದುಳಿದ ವರ್ಗಗಳ ವಸತಿ ನಿಲಯ ನಡೆಸುವ ಹಾಸ್ಟೆಲ್ ಗಳಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ.
ಇನ್ನೂ ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಈ ಬಗ್ಗೆ ನಮಗೆ ಪ್ರಸ್ತಾವನೆ ಬಂದಿದೆ, ಆದರೆ ಸತಿವರು ಯಾವಾಗ ಭೇಟಿ ನೀಡುತ್ತಾರೆ ಎಂಬ ಬಗ್ಗೆ ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅಂಗನವಾಡಿ ಕೇಂದ್ರ ಅಥವಾ ಮಹಿಳಾ ಸಬಲೀಕರಣ ಕೇಂದ್ರದಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ, ಇದರಿಂದ ಮಹಿಳೆಯರ ಜೊತೆ ಚರ್ಚೆ ಸಂವಾದ ನಡೆಸಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ
Advertisement