ಉಪ ಚುನಾವಣೆ: ಕೆಆರ್ ಪುರಂ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಕೇಶವ ರಾಜಣ್ಣ ಪ್ರಬಲ ಆಕಾಂಕ್ಷಿ
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಗಳಾಗಲು ಪೈಪೋಟಿ ಆರಂಭವಾಗಿದ್ದು, ಭೈರತಿ ಬಸವರಾಜು ಅವರಿಂದ ತೆರವಾಗಿರುವ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕೆಪಿಸಿಸಿ ಕಾರ್ಯದರ್ಶಿ ಕೇಶವ ರಾಜಣ್ಣ ಪ್ರಬಲ ಆಕಾಂಕ್ಷಿಯಾಗಿ ಹೊರ ಹೊಮ್ಮಿದ್ದಾರೆ.
Published: 21st September 2019 08:00 PM | Last Updated: 21st September 2019 08:00 PM | A+A A-

ಕೇಶವ ರಾಜಣ್ಣ
ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಗಳಾಗಲು ಪೈಪೋಟಿ ಆರಂಭವಾಗಿದ್ದು, ಭೈರತಿ ಬಸವರಾಜು ಅವರಿಂದ ತೆರವಾಗಿರುವ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕೆಪಿಸಿಸಿ ಕಾರ್ಯದರ್ಶಿ ಕೇಶವ ರಾಜಣ್ಣ ಪ್ರಬಲ ಆಕಾಂಕ್ಷಿಯಾಗಿ ಹೊರ ಹೊಮ್ಮಿದ್ದಾರೆ.
ಕೆ.ಆರ್.ಪುರಂ ಕ್ಷೇತ್ರಕ್ಕೆ ಹೊಸಕೋಟೆ ಕ್ಷೇತ್ರದಿಂದ ಗೆದ್ದಿದ್ದ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜು ಅವರ ಅಳಿಯ ಸಿ.ಎಂ. ಧನಂಜಯ, ನಾರಾಯಣ ಸ್ವಾಮಿ ಸಹ ಆಕಾಂಕ್ಷಿಗಳಾಗಿದ್ದು, ಇವರ ಪೈಕಿ ಕೇಶವ ರಾಜಣ್ಣ ಹೆಸರು ಮಂಚೂಣಿಗೆ ಬಂದಿದೆ.
ಕೇಶವ ರಾಜಣ್ಣ ಕಳೆದ ಹತ್ತು ವರ್ಷಗಳಿಂದ ಅರುಣಾ ಸೇವಾ ಟ್ರಸ್ಟ್ ಮೂಲಕ ಪಶುಸಂಗೋಪನಾ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು, ಕೆಪಿಸಿಸಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಜತೆಗೆ ಸಮಾಜ ಸೇವಾ ಕ್ಷೇತ್ರದಲ್ಲೂ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಅನರ್ಹಗೊಂಡ ಶಾಸಕ ಭೈರತಿ ಬಸವರಾಜ್ ಸೋಲಿಸಲು ಕಾಂಗ್ರೆಸ್ ನಾಯಕರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಭೈರತಿ ವಿರುದ್ಧ ಪ್ರಬಲ ಒಕ್ಕಲಿಗ ನಾಯಕನನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನ ಮಾಡಿದ್ದು, ಮಾಜಿ ಶಾಸಕ ರಾಜಣ್ಣ ಅವರ ಪುತ್ರ ಕೇಶವ್ ರಾಜಣ್ಣಗೆ ಟಿಕೆಟ್ ನೀಡಲು ಕಾಂಗ್ರೆಸ್ ನ ಕೆಲ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.