ಉಪಚುನಾವಣೆಗೆ ಸಿದ್ದವಾಗಿದ್ದೇವೆ, ಎಲ್ಲಾ 15 ಕ್ಷೇತ್ರಗಳಲ್ಲಿ ಗೆಲುವು ನಮ್ಮದಾಗಲಿದೆ: ದಿನೇಶ್ ಗುಂಡೂರಾವ್
ಉಪಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದ್ದು, ಕ್ಷೇತ್ರದ ಜನತೆ ನ್ಯಾಯದ ಪರ ಮತ ಚಲಾವಣೆ ಮಾಡಲಿದ್ದು ನಮಗೆ ಗೆಲುವು ಸಿಗಲಿದೆ ಎಂಬ ವಿಶ್ವಾಸವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಕ್ತಪಡಿಸಿದ್ದಾರೆ.
Published: 21st September 2019 08:01 PM | Last Updated: 21st September 2019 08:01 PM | A+A A-

ದಿನೇಶ್ ಗುಂಡೂರಾವ್
ಬೆಂಗಳೂರು: ಉಪಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದ್ದು, ಕ್ಷೇತ್ರದ ಜನತೆ ನ್ಯಾಯದ ಪರ ಮತ ಚಲಾವಣೆ ಮಾಡಲಿದ್ದು ನಮಗೆ ಗೆಲುವು ಸಿಗಲಿದೆ ಎಂಬ ವಿಶ್ವಾಸವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ,15 ಕ್ಷೇತ್ರಗಳಲ್ಲಿನ ವಾತಾವರಣ ನೋಡಿದರೆ ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ನಮ್ಮ ಪಕ್ಷದ ನಾಯಕರು ನಡೆಸಿದ ಸಮೀಕ್ಷೆ, ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕೆಂಬ ಜನರ ನಿರ್ಧಾರ ಹಾಗೂ ಬಿಜೆಪಿಯಲ್ಲೇ ಒಂದಿಷ್ಟು ವಿರೋದಾಭಾಷಗಳು ಕೇಳಿ ಬರುತ್ತಿವೆ. ಹಲವು ಕ್ಷೇತ್ರದಲ್ಲಿ ಹೊಂದಾಣಿಕೆ ಇಲ್ಲ. ನಮ್ಮವರನ್ನು ಗೆಲ್ಲಿಸಬೇಕು, ಪಕ್ಷ ಬಿಟ್ಟವರಿಗೆ ತಕ್ಕ ಪಾಠ ಕಲಿಸಬೇಕೆಂದು ನಮ್ಮ ಕಾರ್ಯಕರ್ತರು ನಿರ್ಧಾರ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ನಮಗೆ ಗೆಲುವಿಗೆ ಧನಾತ್ಮಕವಾಗಿ ಪರಿಣಮಿಸಲಿದೆ . ಇದರಿಂದ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು.
ನಾವು ಎಲ್ಲಾ ಕ್ಷೇತ್ರದಲ್ಲಿಯೂ ಇದಾಗಲೇ ಚುನಾವಣಾ ತಯಾರಿ ನಡೆಸಿದ್ದು ಹೊಸಕೋಟೆಯಲ್ಲಿ ಸ್ವಾಭಿಮಾನಿ ಸಮಾವೇಶ ಮಾಡಿದ್ದೇವೆ. ಶೇ.90 ರಷ್ಟು ಕಾಂಗ್ರೆಸ್ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದ್ದಾರೆ ಎಂದರು.
ಬಿಜೆಪಿ ಆಪರೇಷನ್ ಕಮಲ ಮಾಡಿ ಮೈತ್ರಿ ಸರ್ಕಾರವನ್ನು ಉರುಳಿಸಿದೆ ಎನ್ನುವುದು ಇಡೀ ರಾಜ್ಯಕ್ಕೆ ತಿಳಿದ ಸಂಗತಿ. ಅನರ್ಹ ಶಾಸಕರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಸ್ಪೀಕರ್ ಆದೇಶದ ಪ್ರಕಾರ 15 ವಿಧಾನಸಭೆಯಲ್ಲಿ ಅನರ್ಹರು ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ನಾವೀಗಾಗಲೇ ಕೇವಿಯಟ್ ಹಾಕಿದ್ದೇವೆ, ಸುಪ್ರೀಂನಲ್ಲಿ ಪ್ರಬಲ ವಾದ ಮಂಡಿಸುತ್ತೇವೆ, ಎಲ್ಲರೂ ಕೂಡಿ ಚುನಾವಣೆ ಎದುರಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.