ಬೆಂಗಳೂರು: ಲಾಕ್ ಡೌನ್ ಸಡಿಲಿಕೆಯನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಪತ್ರ ಬರೆದಿದ್ದಾರೆ.
ಒಂದೇ ದಿನದಲ್ಲಿ 21 ಸೋಂಕಿತರು ಪತ್ತೆಯಾಗಿದ್ದಾರೆ. ಇದು ಇಷ್ಟು ದಿನಗಳಲ್ಲಿ ಅತಿ ಹೆಚ್ಚು ಬೆಂಗಳೂರಿನಲ್ಲಿಯೇ ಪತ್ತೆಯಾದ ಸೋಂಕಿತರ ಸಂಖ್ಯೆ 101ರಿಂದ 123ಕ್ಕೆ ಏರಿದ ಸಂಖ್ಯೆಯಾಗಿದೆ. ಈ ಏರಿಕೆ ಸಾಮುದಾಯಿಕ ಹರಡುವಿಕೆಯೇ ಆಗಿದೆ. ಪರಿಸ್ಥಿತಿ ಹೀಗಿರುವಾಗ ಲಾಕ್‍ಡೌನ್ ಸಡಿಲಿಕೆ ಅಪಾಯಕಾರಿ ನಿರ್ಣಯ, ಕಡಿಮೆ ಪ್ರಮಾಣದಲ್ಲಿ ಸೋಂಕು ಹಬ್ಬುವಿಕೆ ಇದ್ದಾಗ ಲಾಕ್‍ಡೌನ್ ಮಾಡಿ ಹೆಚ್ಚು ರೋಗ ಸೋಂಕಿತರು ಕಾಣುವಾಗ, ರೋಗ ಹಬ್ಬುವಿಕೆ ಹೆಚ್ಚಾಗುವುದು ಸ್ಪಷ್ಟವಾಗಿ ಗೋಚರಿಸುವಾಗ ಲಾಕ್‍ಡೌನ್ ಸಡಿಲಿಕೆ ದುರಂತ ಆಹ್ವಾನಿಸಿದಂತೆ. ದಯವಿಟ್ಟು ಸಡಿಲಿಕೆ ನಿರ್ಣಯ ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಪತ್ರದ ಮುಖೇನ ಹೆಚ್.ಕೆ.ಪಾಟೀಲ್ ಸಲಹೆ ನೀಡಿದ್ದಾರೆ.
ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ (ಕೋವಿಡ್-19)ರಿಂದಾಗಿ ದುರಂತಮಯ ಸನ್ನಿವೇಶ ಕಣ್ಣಿಗೆ ಗೋಚರವಾಗುತ್ತಿದೆ. ಕರ್ನಾಟಕದಲ್ಲಿಯೂ ಸಹ ಇಂತಹದೇ ದುರಂತ ಸನ್ನಿವೇಶಕ್ಕೆ ಆಹ್ವಾನ ಕೊಟ್ಟಂತೆ ಭಾಸವಾಗುತ್ತಿದೆ. ಆತಂಕದ ಕ್ಷಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅತ್ಯಂತ ಗಂಭೀರವಾದ ದುರಂತಮಯ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಸರ್ಕಾರಗಳ ನಿರ್ಲಕ್ಷ್ಯ ಮನೋಭಾವ ಅತ್ಯಂತ ಆಘಾತಕಾರಿ ಎಂದೆನಿಸುತ್ತಿದೆ ಎಂದು ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ಮತ್ತು ರಾಜ್ಯದಲ್ಲಿ ಪರಿಸ್ಥಿತಿ ಹೀಗಿರುವಾಗ ಲಾಕ್‍ಡೌನ್ ಸಡಿಲಗೊಳಿಸುವ ತಮ್ಮ ತೀರ್ಮಾನ ದುರಂತಕ್ಕೆ ಆಹ್ವಾನ ನೀಡಿದಂತಾಗಿದೆ. ಈ ರೀತಿ ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡುವ ಮೂಲಕ ಮಹಾಮಾರಿ ಕೋವಿಡ್-19 ಹರಡುವಿಕೆಯನ್ನು ಮತ್ತಷ್ಟು ವ್ಯಾಪಕಗೊಳಿಸಲು ಸಾಧ್ಯವಾಗುತ್ತಿದೆಯೇ ಹೊರತು, ಅದರಿಂದ ನಾಗರೀಕರಿಗೆ ಯಾವುದೇ ಸಹಾಯವಾಗುವುದಿಲ್ಲ. ಇಂದು ಹಳಿ ತಪ್ಪಿರುವ ಅರ್ಥವ್ಯವಸ್ಥೆಯನ್ನು ಮರಳಿ ಅಭಿವೃದ್ಧಿ ಪಥದತ್ತ ಚಲಿಸುವಂತೆ ಮಾಡಲು ಲಾಕ್‍ಡೌನ್ ಸಡಿಲಿಕೆ ಉಪಾಯವಾಗುವುದಿಲ್ಲ. ಅದಕ್ಕೆ ಸಮಗ್ರವಾದ ಆರ್ಥಿಕ ಚೈತನ್ಯ ತುಂಬುವ ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ ನೈತಿಕ ಮನಸ್ಥಿತಿಯ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಜನತೆ ತಮ್ಮ ತಮ್ಮ ಉದ್ಯೋಗಗಳಲ್ಲಿ, ಮರಳಿ ತೊಡಗಿ ಎಂದಿನಂತೆ ತಮ್ಮ ಆದಾಯವನ್ನು ಕ್ರೋಢೀಕರಿಸಿಕೊಳ್ಳುವುದು ಕೇವಲ ಸಡಿಲಿಕೆಯಿಂದ ಸಾಧ್ಯವಾಗುವುದಿಲ್ಲ. ರಾಷ್ಟ್ರದ ಇತರೆಡೆ ಮತ್ತು ಪ್ರಪಂಚದ ಬೇರೆ ಬೇರೆ ಕಡೆ ಲಾಕ್‍ಡೌನ್ ಇರುವುದರಿಂದ ನಮ್ಮ ಈ ಸಣ್ಣ ಕ್ರಮದಿಂದ ಆರ್ಥಿಕತೆಗೆ ಚೈತನ್ಯ ಸಿಗುತ್ತದೆ ಎಂಬುದು ಒಂದು ಸುಳ್ಳು ಸಮರ್ಥನೆಯಾದೀತು ಎಂದು ಅವರು ತಿಳಿಸಿದ್ದಾರೆ.
ಬಿಡಿಎ ಸೈಟ್‍ಗಳನ್ನು ಹರಾಜು ಮಾಡುವ ಮೂಲಕ, ಅಕ್ರಮ-ಸಕ್ರಮಗಳನ್ನು ಘೋಷಿಸುವ ಮೂಲಕ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗೆ ಅವಕಾಶ ನೀಡುವ ಮೂಲಕ ಸರ್ಕಾರಕ್ಕೆ, ಸಂಪನ್ಮೂಲ ಕ್ರೋಢೀಕರಣಕ್ಕೆ ತಾವು ಮುಂದಾಗಿದ್ದೀರಿ ಎಂದು ಪತ್ರಿಕೆಗಳಲ್ಲಿ ಓದಿದೆ. ಇಂತಹ ನಿರ್ಣಯ ಶ್ರೀಮಂತ ವರ್ಗದ ಪರವೇ ಹೊರತು, ಆರ್ಥಿಕ ದುಸ್ಥಿತಿಯಿಂದ ಬಳಲಿರುವ ಬಡವನ ಪರವಾಗುವುದೇ ಇಲ್ಲ. ನೀವು ಆರ್ಥಿಕ ಚೈತನ್ಯ ತುಂಬಬೇಕಾಗಿರುವುದು ಗಣಿ ಧಣಿಗಳಿಗಲ್ಲ, ರಿಯಲ್ ಎಸ್ಟೇಟ್ ಮಧ್ಯವರ್ತಿ ವ್ಯಾಪಾರಿಗಳಲ್ಲ, ರಾಜಕಾರಣಿಗಳು ಹೊಂದಿರುವ ಕಟ್ಟಡ ಸಂಕೀರ್ಣಗಳ ಬಾಡಿಗೆ ಬರಬೇಕೆಂಬ ಉದ್ದೇಶದಿಂದ ಐಟಿ-ಬಿಟಿ ಕಂಪನಿಗಳಿಗೆ ಲಾಕ್‍ಡೌನ್ ಸಡಿಲಗೊಳಿಸುವ ನಿರ್ಧಾರ ಮೇಲ್ಮಧ್ಯಮ ವರ್ಗದವರಿಗೆ ಮತ್ತು ಸಿರಿವಂತರಿಗೆ ಮಾತ್ರ ಸಹಾಯವಾದೀತು. ಇಂತಹ ನಿರ್ಣಯಗಳಿಂದ ಇತಿಹಾಸದ ಪುಟದಲ್ಲಿ ಕರ್ನಾಟಕಕ್ಕೆ ತಾವು ದುರಂತಮಯ ಸನ್ನಿವೇಶ ತಂದೊಡ್ಡಿದ ಅಪಕೀರ್ತಿಗೆ ಪಾತ್ರರಾಗಬೇಕಾದೀತು ಎಂದು ಎಚ್.ಕೆ.ಪಾಟೀಲ್ ಪತ್ರದಲ್ಲಿ ಎಚ್ಚರಿಸಿದ್ದಾರೆ..
Advertisement