ಬೂತ್ ಮಟ್ಟದಲ್ಲಿ ಮತದಾರರನ್ನು ತಲುಪಿ, ಮನಗೆಲ್ಲಿ:ಕಾರ್ಯಕರ್ತರಿಗೆ ಬಿ ಎಲ್ ಸಂತೋಷ್ ಕರೆ

ಸುಮಾರು ಆರು ತಿಂಗಳ ನಂತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.
ಬಿ ಎಲ್ ಸಂತೋಷ್
ಬಿ ಎಲ್ ಸಂತೋಷ್

ಬೆಂಗಳೂರು: ಆರು ತಿಂಗಳ ನಂತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ಸುಮಾರು ಒಂದು ಗಂಟೆ ಕಾಲ ನಡೆದ ಮಾತುಕತೆಯಲ್ಲಿ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು, ಉದ್ದೇಶಿತ ಸಚಿವ ಸಂಪುಟ ವಿಸ್ತರಣೆ, ಕೋವಿಡ್-19 ಸವಾಲುಗಳು ಮತ್ತು ಪ್ರವಾಹ ಕುರಿತು ಸಂತೋಷ್ ಮತ್ತು ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಕೊರೋನಾ ಸೋಂಕನ್ನು ನಿರ್ವಹಿಸಿದ ರೀತಿಗೆ ಕೆಲ ವಾರಗಳ ಹಿಂದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರಶಂಸಿಸಿದ್ದರು. ಬಿ ಎಲ್ ಸಂತೋಷ್ ಅವರು ಸಹ ಅದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ ನಂತರ ಸಂತೋಷ್ ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಮೋರ್ಚಾ ಅಧ್ಯಕ್ಷರುಗಳ ಜೊತೆ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, ಮಹೇಶ್ ತೆಂಗಿನಕಾಯಿ, ಮಾಜಿ ಎಂ ಎಲ್ಸಿ ಅಶ್ವಥ್ ನಾರಾಯಣ ಗೌಡ ಮತ್ತು ಸಿದ್ದರಾಜು, ಬಿಜೆಪಿ ಕಿಸಾನ್ ಮೋರ್ಚಾ ಮುಖ್ಯಸ್ಥರು, ಅಲ್ಪಸಂಖ್ಯಾತ ಮೋರ್ಚಾ ಮುಖ್ಯಸ್ಥರು, ಎಸ್ ಸಿ, ಎಸ್ ಟಿ ಮೋರ್ಚಾ, ಒಬಿಸಿ ಮೋರ್ಚಾ ಮತ್ತು ಯುವ ಮೋರ್ಚಾ ಮುಖ್ಯಸ್ಥರುಗಳ ಜೊತೆ ನಿನ್ನೆ ಸಭೆ ನಡೆಸಿದ ಬಿ ಎಲ್ ಸಂತೋಷ್ ಸರ್ಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ಕೆಲಸ ಮತ್ತು ಸಾಧನೆಗಳನ್ನು ತಳಮಟ್ಟಕ್ಕೆ ತೆಗೆದುಕೊಂಡು ಹೋಗಿ, ಬೂತ್ ಮಟ್ಟದಿಂದಲೇ ಮತದಾರರ ಗಮನವನ್ನು ಕೆಲಸಗಳ ಮೂಲಕ ಸೆಳೆಯಬೇಕು. ನಂತರ ಪಕ್ಷದ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ತಂಡವನ್ನು ಭೇಟಿ ಮಾಡಿ ಮುಂದಿನ ಆರು ತಿಂಗಳಿಗೆ ಗುರಿಯನ್ನು ನಿಗದಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com