ಕುರುಬ ಸಮುದಾಯಕ್ಕೆ ಎಸ್ ಟಿ ಸ್ಥಾನಮಾನ: ಬಿಜೆಪಿಗೆ ನೈಜ ಕಾಳಜಿ ಇದ್ದರೆ ಕೇಂದ್ರಕ್ಕೆ ಶಿಫಾರಸು ಮಾಡಲಿ- ಸಿದ್ದರಾಮಯ್ಯ
ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರಿಸಲು ಬಿಜೆಪಿಗೆ ನೈಜ ಕಾಳಜಿಯಿದ್ದರೆ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ನಿರ್ಧರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಸಾಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎರಡೂ ಕಡೆ ಬಿಜೆಪಿ ಸರ್ಕಾರವೇ ಇರುವಾಗ ಸಮಾವೇಶ, ಪಾದಯಾತ್ರೆಗಳನ್ನು ಮಾಡುವ ಅಗತ್ಯವೇ ಬೀಳುವುದಿಲ್ಲ. ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಈಶ್ವರಪ್ಪ ಅವರು ಒತ್ತಡ ಹೇರಿದರೆ ಸಾಕು ಎಂದರು.
ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ವಿಚಾರವಾಗಿ ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ನವರ ಹುನ್ನಾರದಿಂದ ಕುರುಬ ಸಮುದಾಯವನ್ನು ಒಡೆದು ನನ್ನನ್ನು ಮೂಲೆಗುಂಪು ಮಾಡುವ ಪ್ರಯತ್ನ ಮೇಲ್ನೋಟಕ್ಕೆ ನಡೆಯುತ್ತಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ನೀಡಿದ್ದ ದೊಡ್ಡ ಮೊತ್ತದ ಹಣವನ್ನು ಎನ್.ಆರ್ ಸಂತೋಷ್ ಹಾಗೂ ಸಿ.ಪಿ ಯೋಗೀಶ್ವರ್ ಲಪಟಾಯಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಣ ನೀಡಿದವರು ಯಾರು? ಎಷ್ಟು ಹಣ ನೀಡಿದ್ದರು? ಅದು ಬ್ಲಾಕ್ ಮನಿಯೋ? ವೈಟ್ ಮನಿಯೋ? ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ