ನಮ್ಮ ಕುಟುಂಬಕ್ಕೆ ಅದೊಂದು ಶಾಪ ಇದೆ: ಹೆಚ್.ಡಿ. ಕುಮಾರಸ್ವಾಮಿ

ಬಿಜೆಪಿ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ಪಕ್ಷವಲ್ಲ. ಬಿಜೆಪಿ ಸರ್ಕಾರ ಮುಂದಿನ ಎರಡುವರೇ ವರ್ಷವೂ ಸಂಪೂರ್ಣ ಅಧಿಕಾರ ನಡೆಸಲಿದೆ.
ಕುಮಾರಸ್ವಾಮಿ
ಕುಮಾರಸ್ವಾಮಿ
Updated on

ಮೈಸೂರು: ಬಿಜೆಪಿ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ಪಕ್ಷವಲ್ಲ. ಬಿಜೆಪಿ ಸರ್ಕಾರ ಮುಂದಿನ ಎರಡುವರೇ ವರ್ಷವೂ ಸಂಪೂರ್ಣ ಅಧಿಕಾರ ನಡೆಸಲಿದೆ. ಆದರೆ ಉತ್ತಮ ಅಧಿಕಾರ ನಡೆಸಲಿ ಎನ್ನುವುದೇ ನಮ್ಮ ಉದ್ದೇಶ, ನಮ್ಮ ಸಹಕಾರವಿರಲಿದೆ. ಬಿಜೆಪಿ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ಪಕ್ಷ ಅಲ್ಲ ಅಂತ ಗೊತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 
 
ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇರೋದಿಲ್ಲ. ಆದ್ರೂ ಕಾರ್ಯಕರ್ತರಲ್ಲಿ‌ ಹುಮ್ಮಸ್ಸು ತರಲು ಸಭೆ ಮಾಡಿದ್ದೇವೆ. ಕೆಲವು ಮುಖಂಡರ ಹೇಳಿಕೆ‌ ಗಮನಿಸಿದ್ದೇನೆ. ಅವಿರೋಧ ಆಯ್ಕೆ ಮಾಡಿಕೊಂಡರೆ ಬಹುಮಾನ‌ ಹಾಗೂ ಹೆಚ್ಚಿನ ಅನುದಾನ ಕೊಡುವ ಹೇಳಿಕೆ‌ ನೋಡಿದ್ದೇನೆ. ಈ‌ ಚುನಾವಣೆಯಲ್ಲಿ ಚಿಹ್ನೆ ಇಲ್ಲವಾದರೂ ಪಕ್ಷದ ಕಾರ್ಯಕರ್ತರೇ ಚುನಾವಣೆಗೆ ನಿಲ್ತಾರೆ. ನಮ್ಮ‌ ಪಕ್ಷದ ಕಾರ್ಯಕರ್ತರಿಗೂ ಸಲಹೆ ಸೂಚನೆ ನೀಡಿದ್ದೇನೆ ಎಂದರು. 
 
ಇದೇ ವೇಳೆ ಬಿಜೆಪಿಯ ಗ್ರಾಮಸ್ವರಾಜ್ ಕಾರ್ಯಕ್ರಮದ ಬಗ್ಗೆ ಲೇವಡಿ ಮಾಡಿದ ಅವರು, ಗ್ರಾಮಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮಂತ್ರಿಗಳು ಗ್ರಾಮಗಳಿಗೆ‌ ಹೋಗ್ತಿದ್ದಾರೆ. ಈಗಲಾದರೂ ಇವರಿಗೆ ಹಳ್ಳಿ ನೆನಪಾಯಿತಲ್ಲ. ಇವರು ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡ್ತಿದ್ದಾರೆ. ಆದ್ರೆ ಆ ಗ್ರಾಮಗಳಲ್ಲಿನ‌ ಸಮಸ್ಯೆ ಬಗ್ಗೆ ಮಾತನಾಡೋದನ್ನ ನಾನೇಲ್ಲು ಕಂಡಿಲ್ಲ. ಇವರಿಗೆ ಚುನಾವಣೆಯೇ ಮುಖ್ಯ ಎಂದು ಟೀಕಿಸಿದರು. 
 
ಸಿಎಂ ಕೂಡ ಬೆಳಗಾವಿ ಪ್ರವಾಸ ಮಾಡ್ತಿದ್ದಾರೆ. ಅಲ್ಲಿ ಕೇವಲ ಕೋರ್ ಕಮಿಟಿ ಮೀಟಿಂಗ್‌ ಗಾಗಿ ಹೋಗಿ ವಾಪಸ್ಸಾಗುತ್ತಿದ್ದಾರೆ. ಬೆಳಗಾವಿಯಲ್ಲಿ ನೆರೆಯಿಂದ ಆಗಿರುವ ನಷ್ಟಕ್ಕೆ ಇನ್ನು ಪರಿಹಾರ ನೀಡಿಲ್ಲ. ಎಲ್ಲ‌ ಮಂತ್ರಿಗಳು ಅಲ್ಲೆ ಇದ್ದಾರೆ ಆದ್ರೂ ಅಲ್ಲಿನ ಸಮಸ್ಯೆ ಕೇಳೋಲ್ಲ. ಗಾಂಧಿ ಪರಿಕಲ್ಪನೆ ಗ್ರಾಮ ಸ್ವರಾಜ್ ಹೆಸರಿನಲ್ಲಿ ಮಾಡುತ್ತಿದ್ದೀರಿ. ಅದಕ್ಕೆ ಗೌರವ ತರುವುದಾದರೆ ಜನರ ಕಷ್ಟ ಕೇಳಿ ಎಂದು ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು. 
 
ಉಪ ಚುನಾವಣೆಗಳ ಗೆಲುವು ಶಾಶ್ವತ ಅಲ್ಲ. ನಮಗು ಶಾಶ್ವತ ಅಲ್ಲ‌ ನಿಮಗೂ ಶಾಶ್ವತ ಅಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆದ್ದರು. 6 ತಿಂಗಳ ಅಂತರದಲ್ಲಿ ಅದೆ ಕ್ಷೇತ್ರದಲ್ಲು ಸೋತರು. ಉಪಚುನಾವಣೆ ಫಲಿತಾಂಶ‌ ಬೇರೆ ಸಾರ್ವತ್ರಿಕ ಚುನಾವಣೆ ಫಲಿತಾಂಶ ಬೇರೆ. ಉಪಚುನಾವಣೆ ಗೆದ್ದ ತಕ್ಷಣ ಇಡೀ‌ರಾಜ್ಯ ನಮ್ಮ‌ಕಡೆ ಇದೆ ಅಂದು‌ಕೊಳ್ಳಬೇಡಿ ಎಂದು ಬಿಜೆಪಿಗೆ ಹೆಚ್,ಡಿ.ಕೆ ಟಾಂಗ್ ನೀಡಿದರು. 
 
ಕರ್ನಾಟಕದಲ್ಲಿ ‌ಬಿಜೆಪಿ ಮುಖ್ಯಮಂತ್ರಿ‌ ಇದ್ದಾರೆ ಅನ್ನೋದನ್ನ ಮರೆತೇಬಿಟ್ಟಿದ್ದಾರೆ. ಕೇಂದ್ರ ಸರ್ಕಾರ‌ ಕರ್ನಾಟಕವನ್ನ‌ ಲೆಕ್ಕಕ್ಕೆ ಇಟ್ಟಿಲ್ಲ. ಕರ್ನಾಟಕದಲ್ಲಿ ‌ಬಿಜೆಪಿ ಮುಖ್ಯಮಂತ್ರಿ‌ ಇದ್ದಾರೆ ಅನ್ನೋದನ್ನ ಮರೆತೆಬಿಟ್ಟಿದ್ದಾರೆ. ಇಂತಹ ಸಂದರ್ಭಗಳಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ರಾಜ್ಯವನ್ನ ಇನ್ನಷ್ಟು ಸಂಕಷ್ಟಕ್ಕೆ ದೂಡಲಿದೆ. ನೀವು ಮಾಡಿರುವ ನಿಗಮ ಹಾಗೂ ಪ್ರಾಧಿಕಾರದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಏನಿದೆ. ಕೆಲವು ನಿಗಮದಲ್ಲಿ 50 ಲಕ್ಷವು ಹಣವಿಲ್ಲ. ಆದ್ರೂ ಅವುಗಳ ಅಭಿವೃದ್ಧಿಗೆ ಕೋಟಿ ಕೋಟಿ ಬೇಕಾಗಿದೆ. ಇದರಿಂದ ಪಕ್ಷ ಸಂಘಟನೆ ಆಗುತ್ತೆ ಕಾರ್ಯಕರ್ತರಿಗೆ ಸಮಾಧಾನ ಆಗುತ್ತೆ ಅಂದುಕೊಂಡಿದ್ದೀರಾ. ಆದ್ರೆ ಅದು ಸಾಧ್ಯವೇ ಇಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. 
 
ಇದೇ ವೇಳೆ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವಿರುದ್ಧ ಅಸಮಾಧಾನ ಹೊರ ಹಾಕಿದ ಅವರು, ನಮ್ಮ ಕುಟುಂಬಕ್ಕೆ ಅದೊಂದು ಶಾಪ ಇದೆ. ನಾವು ಯಾರನ್ನ ಬೆಳೆಸುತ್ತೇವೋ ಅಂತವರಿಂದಲೇ ಮೋಸಗೊಳ್ಳುತ್ತಿದ್ದೇವೆ. ಆ ಶಾಪವನ್ನ ಹೇಗೆ ವಿಮೋಚನೆ ಮಾಡಬೇಕೋ ಎನ್ನುವುದು ನಮಗಿನ್ನು ತಿಳಿಯುತ್ತಿಲ್ಲ. ಒಂದು ರಿಸರ್ಚ್ ಮಾಡಿ ಆ ಬಳಿಕ ಶಾಪ ವಿಮೋಚನೆ ಮಾಡಿಕೊಳ್ಳುತ್ತೇವೆ. ರಾಜಕೀಯವಾಗಿ ಅನಾಥರಾದಾಗ ಯಾವ ಹಕ್ಕಿಗಳು ಸೇರಿಸದ ಸಂದರ್ಭದಲ್ಲಿ ನಾವು ಗೂಡು ನೀಡಿದ್ದೆವು. ವಿಶ್ವನಾಥ್ ಗೆ ದೇವೇಗೌಡ್ರು ಬೇಕಂತೆ. ಆದ್ರೆ ಕುಮಾರಸ್ವಾಮಿ ಕಂಡ್ರೆ ಆಗಲ್ಲವಂತೆ. ಈ ಸಮಸ್ಯೆ ನಮ್ಮ ಕುಟುಂಬಕ್ಕೆ ಬಹಳ ದಿನಗಳಿಂದಲೂ ಇದೆ. ಬೆಳೆಸಿದವರಿಂದಲೇ ನಮಗೆ ಮೋಸ ಆಗುತ್ತೆ ಎಂದು ಹಳ್ಳಿ ಹಕ್ಕಿ ಹೆಚ್. ವಿಶ್ವನಾಥ್ ಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com