ಬೆಂಗಳೂರು: ಜೆಡಿಎಸ್ ನಿಂದ ದೂರ ಉಳಿದು, ಸಿದ್ಧು ಬಣದಲ್ಲಿ ಗುರುತಿಸಿಕೊಂಡಿದ್ದಂತ ಸಿಎಂ ಇಬ್ರಾಹಿಂ ಅವರನ್ನು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿರುವುದು ಈಗ ಕುತೂಹಲಕ್ಕೂ ಕಾರಣವಾಗಿದೆ.
ಜನತಾ ದಳದಲ್ಲಿ ಸಕ್ರಿಯರಾಗಿದ್ದ ಇಬ್ರಾಹಿಂ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿಕಟವರ್ತಿಗಳಲ್ಲಿ ಪ್ರಮುಖರು. ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್ ಸೇರಿದ್ದರು. ಇಬ್ರಾಹಿಂ ಅವರು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರಿಂದ ಕೆಲವು ದಿನಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.
ಫ್ರೇಜರ್ ಟೌನ್‌ನಲ್ಲಿರುವ ಅವರ ಮನೆಗೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದ ಕುಮಾರಸ್ವಾಮಿ, ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ.
2004 ರ ಲೋಕಸಭೆ ಚುನಾವಣೆ ನಂತರ ಸಿಎಂ ಇಬ್ರಾಹಿಂ ಜೆಡಿಎಸ್ ತೊರೆದಿದ್ದರು. ಸೋಮವಾರ ಇಬ್ರಾಹಿಂ ಭೇಟಿಯ ನಂತರ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ನಲ್ಲಿ ಇಬ್ರಾಹಿಂ ಅವರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ, ಹೀಗಾಗಿ ಮರಳಿ ಜೆಡಿಎಸ್ ಗೆ ಬರುವಂತೆ ಆಹ್ವಾನಿಸಿದ್ದೇನೆ ಎಂದು ಹೇಳಿದ್ದಾರೆ, ಇಬ್ರಾಹಿಂ ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಎಚ್ ಡಿಕೆ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
Advertisement