'ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಎಲ್ಲಿ ಹೇಳಿದ್ದೇನೆ, ನಿಮ್ಮಿಷ್ಟದಂತೆ ಸುದ್ದಿ ಹಬ್ಬಿಸಬೇಡಿ': ಮಾಜಿ ಸ್ಪೀಕರ್ ಗರಂ!

ರಾಜಕೀಯದಿಂದ ನಾನು ನಿವೃತ್ತಿಯಾಗುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ, ನಿವೃತ್ತಿಯಾಗಲು ನಾನು ಈಗ ಆರಾಮಾಗಿ ಇಲ್ಲ, ಹಲವು ಜವಾಬ್ದಾರಿಗಳ ಮಧ್ಯೆ ಬಂಧಿಯಾಗಿದ್ದೇನೆ, ಈ ಸುಳ್ಳು ವದಂತಿ ನನ್ನ ಮನಸ್ಸಿಗೆ ತೀವ್ರ ಬೇಸರವನ್ನುಂಟುಮಾಡಿದೆ ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ಎಸ್ ರಮೇಶ್ ಕುಮಾರ್ ಹೇಳಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್
ಮಾಜಿ ಸ್ಪೀಕರ್ ರಮೇಶ್ ಕುಮಾರ್

ಕೋಲಾರ: ರಾಜಕೀಯದಿಂದ ನಾನು ನಿವೃತ್ತಿಯಾಗುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ, ಈ ಬಗ್ಗೆ ಬಂದಿರುವ ಸುದ್ದಿಗಳೆಲ್ಲ ಸುಳ್ಳು, ನಿವೃತ್ತಿಯಾಗಲು ನಾನು ಈಗ ಆರಾಮಾಗಿ ಇಲ್ಲ, ಹಲವು ಜವಾಬ್ದಾರಿಗಳ ಮಧ್ಯೆ ಬಂಧಿಯಾಗಿದ್ದೇನೆ, ಈ ಸುಳ್ಳು ವದಂತಿ ನನ್ನ ಮನಸ್ಸಿಗೆ ತೀವ್ರ ಬೇಸರವನ್ನುಂಟುಮಾಡಿದೆ ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ಎಸ್ ರಮೇಶ್ ಕುಮಾರ್ ಹೇಳಿದ್ದಾರೆ.

ಕೋಲಾರದಲ್ಲಿ ನಿನ್ನೆ ಅವರು ಸುದ್ದಿಗಾರರ ಮುಂದೆ ಮಾತನಾಡಿ, ನಾನು ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಹೇಳಿದವರು ಯಾರು, ನಾನು ಯಾವುದಾದರೂ ಸಭೆಗೆ ಹೋಗಿದ್ದೇನೆಯೇ, ಭಾಷಣದಲ್ಲಿ ಮಾತನಾಡುವಾಗ ಹೇಳಿದ್ದೇನೆಯೇ ಅಥವಾ ಪತ್ರಿಕಾ ಹೇಳಿಕೆ ನೀಡಿ, ಮಾಧ್ಯಮದವರನ್ನು ಕರೆಸಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದೇನೆಯೇ, ಎಲ್ಲಿ ಹೇಳಿದ್ದೇನೆ, ವಿಡಿಯೊ ಕ್ಲಿಪ್ಪಿಂಗ್ ಇದ್ದರೆ ತೆಗೆಯಿರಿ, ನಿವೃತ್ತಿ ಕೊಡಲು ನಾನು ಅಷ್ಟು ವಿರಾಮವಾಗಿರುವ ಮನುಷ್ಯ ಅಲ್ಲ, ಎಲ್ಲ ಜವಾಬ್ದಾರಿಗಳ ಮಧ್ಯೆ ಇದ್ದು ಅವುಗಳನ್ನು ನಿರ್ವಹಿಸಿ ನನ್ನ ಕರ್ತವ್ಯ ಮುಗಿಸಿ ನಾನು ನಿವೃತ್ತಿಯಾಗಬೇಕು, ಸುಮ್ಮಸುಮ್ಮನೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಏಕೆ ಹಬ್ಬಿಸುತ್ತೀರಿ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಗೌರವದಿಂದ, ಸಂಯಮದಿಂದ, ಸಹನೆ ಇಟ್ಟುಕೊಂಡು ನಾವು ಮಾಧ್ಯಮಗಳ ಜೊತೆ ನಡೆದುಕೊಳ್ಳುತ್ತೇವೆ.ಆದರೆ ನೀವು ಹೀಗೆ ಇಲ್ಲಸಲ್ಲದ ಬೇಜವಾಬ್ದಾರಿ ಸುದ್ದಿಗಳನ್ನು ಹಬ್ಬಿಸುತ್ತೀರಿ, ಇದರಿಂದ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ನಾವು ಸಾರ್ವಜನಿಕ ಜೀವನದಲ್ಲಿ ಸಭ್ಯವಾಗಿ ಇರಬಾರದೇ ಹಾಗಾದರೆ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

ನಾನು ನಿವೃತ್ತಿಯಾಗುತ್ತಿಯಾಗುತ್ತಿದ್ದೇನೆ ಎಂದು ಮಾಧ್ಯಮಗಳಲ್ಲಿ ಸುದ್ದಿ ನೋಡಿ, ಓದಿ ಹಲವರು ನನಗೆ ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಫೋನ್ ಮಾಡಿ, ಯಾಕಣ್ಣಾ ಹೀಗೇಕೆ ಮಾಡಿದಿರಿ ಎಂದು ಕೇಳಿದರು, ನನಗೆ ಮುಜುಗರವಾಯಿತು. ಆಗಲೇ ನನಗೆ ವಿಷಯ ಗೊತ್ತಾಗಿದ್ದು, ಇದಕ್ಕೆ ಪತ್ರಿಕಾ ಧರ್ಮ, ಪತ್ರಿಕೋದ್ಯಮ ಎಂದು ಕರೆಯುತ್ತಾರೆಯೇ, ಇದು ಪೀತ ಪತ್ರಿಕೋದ್ಯಮ, ರಾಜಕೀಯದಿಂದ ನಿವೃತ್ತಿಯಾಗಬೇಕೆಂದು ನಾನು ಏಕಾಏಕಿ ನಿವೃತ್ತಿ ತೆಗೆದುಕೊಳ್ಳಲು ನಾನೇನು ಸರ್ವಾಧಿಕಾರಿಯೇ, ನನ್ನನ್ನು ರಾಜಕೀಯದಲ್ಲಿ ಬೆಳೆಯಲು ಕಾರಣಕರ್ತರಾದ ಪಕ್ಷದವರು, ಕ್ಷೇತ್ರದ ಜನರು, ಕಾರ್ಯಕರ್ತರು, ಕುಟುಂಬದವರ ಅಭಿಪ್ರಾಯ ಕೇಳಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com